ಬೆಂಗಳೂರು: ಕೋಗಿಲು ಬಡಾವಣೆ ತ್ಯಾಜ್ಯ ವಿಲೇವಾರಿ ಜಾಗದ ಅಕ್ರಮ ಒತ್ತುವರಿ ಪ್ರಕರಣದಲ್ಲಿ ನಿರಾಶ್ರಿತರಾಗಿರುವ ಅರ್ಹರು ಹಾಗೂ ಸ್ಥಳೀಯರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೋಗಿಲು ಲೇಔಟ್ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನೀಡಲಾಗುವುದು ಎಂದು ತಿಳಿಸಿದರು.
ಕೋಗಿಲು ಅಕ್ರಮ ಮನೆ ತೆರವು ಸಂಬಂಧ ಕೆ.ಸಿ.ವೇಣುಗೋಪಾಲ್ ಅವರ ಟ್ವೀಟ್ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ, ವೇಣುಗೋಪಾಲ್ ಅವರು ನಮ್ಮ ಆಡಳಿತದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ವೇಣುಗೋಪಾಲ್ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ನಮಗೆ ಸಲಹೆ ನೀಡಲು ಅವರಿಗೆ ಎಲ್ಲಾ ಅಧಿಕಾರ ಇದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದು ರಾಜ್ಯ ನಾಯಕರಿಗೆ ಸಲಹೆ ನೀಡುವುದಿಲ್ಲವೇ? ನಮ್ಮದು ರಾಷ್ಟ್ರೀಯ ಪಕ್ಷ, ನಮಗೆ ನಮ್ಮದೇ ಜವಾಬ್ದಾರಿ ಇದೆ. ನಾವು ಜಾತಿ, ಧರ್ಮದ ಮೇಲೆ ಹೋಗುವುದಿಲ್ಲ. ಅಲ್ಲಿ ಅಕ್ರಮವಾಗಿ ಶೆಡ್ ಹಾಕಿಕೊಂಡವರಲ್ಲಿ ಯಾವ ಸಮುದಾಯದವರು ಎಷ್ಟಿದ್ದರು ಎಂಬ ಮಾಹಿತಿ ತರಿಸಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ಸಿಎಂ ನಾಳೆ ಈ ವಿಚಾರವಾಗಿ ಸಭೆ ಕರೆದಿದ್ದಾರೆ. ಈ ಪ್ರಕರಣದ ಬಗ್ಗೆ ನಾನು ಪರಿಶೀಲನೆ ಮಾಡಿದ್ದು, ವ್ಯಕ್ತಿಯೊಬ್ಬ ಜನರಿಂದ ಹಣ ಸಂಗ್ರಹಿಸಿ ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿಕೊಳ್ಳಲು ಹೇಳಿದ್ದಾನೆ ಎಂದರು.
ಬಿಜೆಪಿ ಪಕ್ಷದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ಸುದ್ದಿಯಲ್ಲಿರಲು ಕೆಲವರು ಹೇಳಿಕೆ ನೀಡುತ್ತಾರೆ. ನಿತ್ಯ ಒಂದೊಂದು ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ ಎಂದರು.

