HomeKarnatakaBig Update: ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದ ಕೆ.ಜೆ.ಜಾರ್ಜ್!

Big Update: ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದ ಕೆ.ಜೆ.ಜಾರ್ಜ್!

ಕರ್ನಾಟಕ ರಾಜ್ಯ ರಾಜಕಾರಣದ ಬಿಗ್ ಅಪ್‌ಡೇಟ್ ಒಂದಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ನಾಯಕರಾದ ಕೆ.ಜೆ.ಜಾರ್ಜ್ ರಾಜೀನಾಮೆ ಪತ್ರವನ್ನು ನೀಡಿದ್ದರು. ಕೆ.ಜೆ.ಜಾರ್ಜ್ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು.

ಟಿವಿ9 ವಾಹಿನಿ ಈ ಕುರಿತು ವರದಿಯೊಂದನ್ನು ಪ್ರಸಾರ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಕಾರಣಕ್ಕೆ ಕೆ.ಜೆ.ಜಾರ್ಜ್ ಬೇಸತ್ತು, ಸಚಿವ ಸಂಪುಟ ಸಭೆಗೆ ಗೈರಾಗಿದ್ದರು, ಸಿದ್ದರಾಮಯ್ಯಗೆ ರಾಜೀನಾಮೆ ಪತ್ರವನ್ನು ನೀಡಿದ್ದರು ಎಂದು ವರದಿ ಹೇಳಿದೆ.

ಏನಿದು ಸಿಎಂ ಪುತ್ರನ ವಿಚಾರ?: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿವಿಧ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಗುಟ್ಟಾದ ವಿಚಾರ ಏನಲ್ಲ. ಹಲವು ಬಾರಿ ಈ ಕುರಿತು ಸಚಿವರು ಅಸಮಾಧಾನ ಹೊರಹಾಕಿ ಆರೋಪಗಳನ್ನು ಮಾಡಿದ್ದಾರೆ. ಈಗ ಇದೇ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದರು. ಸಚಿವ ಕೆ.ಜೆ.ಜಾರ್ಜ್ ಸೂಚನೆಯನ್ನು ಮೀರಿ ವರ್ಗಾವಣೆ ಕೈಗೊಳ್ಳಲಾಗಿತ್ತು. ಇದರಿಂದಾಗಿ ಅಸಮಾಧಾನಗೊಂಡಿದ್ದ ಕೆ.ಜೆ.ಜಾರ್ಜ್ ಸಿದ್ದರಾಮಯ್ಯ ಗೃಹ ಕಚೇರಿಗೂ ಹೋಗಿ ಈ ಕುರಿತು ಮಾತುಕತೆ ನಡೆಸಿದ್ದರು.

ಆದರೂ ಸಹ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮುಂದುವರೆದಿತ್ತು. ಆದ್ದರಿಂದ ಸಚಿವ ಸಂಪುಟ ಸಭೆಗೆ ಗೈರಾಗಿದ್ದ ಕೆ.ಜೆ.ಜಾರ್ಜ್, ಸಿದ್ದರಾಮಯ್ಯಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದರು ಎಂದು ಟಿವಿ9 ವರದಿ ಹೇಳಿದೆ.

ಸಿದ್ದರಾಮಯ್ಯ ಪರಮಾಪ್ತರಾದ ಕೆ.ಜೆ.ಜಾರ್ಜ್, ನಾನು ನಿನ್ನ ಜೊತೆ ಸದಾ ಇರುತ್ತೇನೆ. ಆದರೆ ನನ್ನ ಮಾತು ನಡೆಯುವುದಿಲ್ಲ ಎಂದರೆ ಸರ್ಕಾರದಲ್ಲಿ ಇರಲ್ಲ ಎಂದು ಸಿದ್ದರಾಮಯ್ಯ ಬಳಿ ಅಸಮಾಧಾನ ತೋಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ವಿಧಾನಸಭೆಯಲ್ಲಿಯೂ ಪ್ರಸ್ತಾಪ: ಇಂಧನ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪದ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿದೆ. ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಗುರುವಾರದ ಕಲಾಪದಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದರು. ಟಿವಿ 9 ವರದಿಯನ್ನು ಉಲ್ಲೇಖಿಸಿದರು.

ಆಗ ಸದನದಲ್ಲಿದ್ದ ಸಚಿವ ಕೆ.ಜೆ.ಜಾರ್ಜ್, “ನಾನು ರಾಜೀನಾಮೆ ನೀಡಲು ಮುಂದಾಗಿಲ್ಲ. ನನ್ನ ಸಂಪೂರ್ಣ ಬೆಂಬಲ ಸಿದ್ದರಾಮಯ್ಯಗೆ ಇದೆ” ಎಂದು ಸ್ಪಷ್ಟಪಡಿಸಿದರು.

ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ, “ಸುಳ್ಳು ಸುದ್ದಿ, ಜಾರ್ಜ್ ರಾಜೀನಾಮೆ ಕೊಟ್ಟಿಲ್ಲ” ಎಂದು ಸ್ಪಷ್ಟಪಡಿಸಿದರು.

ಪ್ರಭಾವಿ ನಾಯಕ ಕೆ.ಜೆ.ಜಾರ್ಜ್: ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕ ಕೆ.ಜೆ.ಜಾರ್ಜ್. ಕೆಲವು ದಿನಗಳ ಹಿಂದೆ ಅವರು ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು.

ಸಿದ್ದರಾಮಯ್ಯಗೆ ಸಹ ಜಾರ್ಜ್ ಪರಮಾಪ್ತರು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರ್ಜ್ ಅವರನ್ನು ಗೃಹ ಸಚಿವರನ್ನಾಗಿ ಮಾಡಲಾಗಿತ್ತು. ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ 2016ರ ಜುಲೈ 18ರಂದು ರಾಜೀನಾಮೆ ನೀಡಿದ್ದರು. ಬಳಿಕ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಈ ಬಾರಿಯೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕೆ.ಜೆ.ಜಾರ್ಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಧನ ಇಲಾಖೆಯ ಸಚಿವರಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಕೆ.ಜೆ.ಜಾರ್ಜ್ ಬೆಂಗಳೂರು ನಗರದ ಸರ್ವಜ್ಞ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರು. 2023ರ ಚುನಾವಣೆಯಲ್ಲಿ ಅವರು 118,783 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಈ ವರದಿ, ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular