ಶಿಮ್ಲಾ: ಹಿಮಾಚಲಪ್ರದೇಶದಾದ್ಯಂತ ವರುಣಾರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಿನ್ನೌರ್ ಕೈಲಾಸ ಯಾತ್ರೆ ಸ್ಥಗಿತಗೊಳಿಸಲಾಗಿದೆ.
ಈ ನಡುವೆ ಕಿನ್ನೌರ್ ಕೈಲಾಸ ಯಾತ್ರೆ ಮಾರ್ಗಮಧ್ಯೆ ಸಿಲುಕಿದ್ದ 413 ಯಾತ್ರಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರಿ ಮಳೆಗೆ ತಂಗ್ಲಿಪ್ಪಿ ಹಾಗೂ ಕಂಗರಂಗ್ ನಡುವಿನ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಸೇತುವೆ ಬಳಿ ಯಾತ್ರಿಕರು ಸಿಲುಕಿದ್ದರು. ಜಿಪ್ ಲೈನ್ ಮೂಲಕ ಯಾತ್ರಿಕರನ್ನು ರಕ್ಷಿಸಲಾಗಿದೆ.
ಕೈಲಾಸ ಯಾತ್ರೆಯ ಚಾರಣ ಹಾದಿ ಸಂಪೂರ್ಣ ಹಾಳಾಗಿದ್ದು, ನಡೆದು ಹೋಗುವುದು ಅಪಾಯಕಾರಿಯಾಗಿದೆ. ಯಾತ್ರಿಕರ ಸುರಕ್ಷತೆ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಯಾತ್ರೆ ಸ್ಥಗಿತಗೊಳಿಸಲಾಗಿದೆ.
ಕಿನ್ನೌರ್ ಕೈಲಾಸ ಶಿವನ ಚಳಿಗಾಲದ ವಾಸಸ್ಥಾನ ಎಂದೇ ಖ್ಯಾತಿ ಪಡೆದಿದೆ. ಇದು ಸಮುದ್ರ ಮಟ್ಟದಿಂದ 19,850 ಅಡಿ ಎತ್ತರದಲ್ಲಿದೆ. ಕಿನ್ನೌರ್ ಕೈಲಾಸ ಯಾತ್ರೆ ಜುಲೈ 15ರಿಂದ ಆರಂಭವಾಗಿದ್ದು, ಆ.30ಕ್ಕೆ ಕೊನೆಗೊಳ್ಳಲಿದೆ.