ಪೈರಸಿ ಪ್ರತಿ ಚಿತ್ರರಂಗವೂ ಎದುರಿಸುತ್ತಿರುವ ಸಮಸ್ಯೆ. ಚಿತ್ರ ಬಿಡುಗಡೆಯಾದ ದಿನವೇ ಚಿತ್ರಮಂದಿರದಲ್ಲಿ ಸೆರೆ ಹಿಡಿದ ಇಡೀ ಚಿತ್ರ ಹೇಗಾದರೂ ಪೈರಸಿ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿಬಿಡುತ್ತದೆ.
ಇದೇ ಸಮಸ್ಯೆ ವಿರುದ್ಧ ನಟ ಕಿಚ್ಚ ಸುದೀಪ್ ಕಳೆದ ವರ್ಷ ತಮ್ಮ ನಟನೆಯ ಮಾರ್ಕ್ ಬಿಡುಗಡೆಯಾದಾಗ ಹೋರಾಟ ನಡೆಸಿದ್ದರು. ಮಾರ್ಕ್ ಪೈರಸಿ ಆಗದಂತೆ ಚಿತ್ರತಂಡದ ಜತೆಗೂಡಿ ಮುಂಜಾಗ್ರತಾ ಕ್ರಮ ಕೈಗೊಂಡು ಪೈರಸಿ ಚಿತ್ರ ಹಂಚಿಕೊಳ್ಳುವವರ ಮೇಲೆ ಕಣ್ಣಿಡುವಂತೆ ನೋಡಿಕೊಂಡಿದ್ದರು.
ಇದೀಗ ಮತ್ತೊಮ್ಮೆ ಸುದೀಪ್ ಪೈರಸಿ ವಿರುದ್ಧ ಮಾತನಾಡಿದ್ದಾರೆ. ನಿರ್ದೇಶಕ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್‌ನ ಕೆಡಿ ದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಚಿತ್ರತಂಡ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಈ ಸಮಯದಲ್ಲಿ ಅವರಿಗೆ ಪೈರಸಿ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿದ ಅವರು ‘ಇಲ್ಲಿ ಧ್ರುವ ಅವರು ಕೂತಿದ್ದಾರೆ. ಅವರಿಗೆ ಒಳ್ಳೆಯ ಅಭಿಮಾನಿಗಳ ಬಳಗವಿದೆ, ಅವರ ಹಿಂದೆ ಕರ್ನಾಟಕದ ಜನತೆ ಇದ್ದಾರೆ, ನೋಡಿಕೊಳ್ತಾರೆ ಬಿಡಿ ತಲೆಕೆಡಿಸಿಕೊಳ್ಳಬೇಡಿ. ಹಾಗೆಯೇ ಕಳ್ಳತನದ ಮಾಲ್‌ಗೆ ಆಸೆಪಡುವವರು ಶಿವಾಜಿನಗರದಲ್ಲಿ ಸಿಕ್ಕೇ ಸಿಕ್ತಾರೆ. ಹಾಗಂತ ಯಾವ್ ಮಾಲ್ ಕೂಡ ಕ್ಲೋಸ್ ಆಗಿಲ್ಲ. ಕಳ್ಳತನದ ಮಾಲ್‌ಗೆ ಆಸೆಪಡೋರು ಕಳ್ಳರು. ಆ ಕಳ್ಳ ನನ್‌ಮಕ್ಕಳ ಬಗ್ಗೆ ನಾವೇನು ಮಾತನಾಡೋಣ’ ಎಂದು ಪ್ರತಿಕ್ರಿಯಿಸಿದರು.

