ಬೆಳಗಾವಿ: ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿ, ಮೃತದೇಹದ ಮುಂದೆ ಗೋಗರೆದು ಕಣ್ಣೀರಿಟ್ಟು ನಾಟಕವಾಡಿದ್ದ ಪತ್ನಿಯನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಶೈಲಾ ಬಂಧಿತ ಮಹಿಳೆ. ಶಿವನಗೌಡ ಪಾಟೀಲ್ ಕೊಲೆಯಾದ ವ್ಯಕ್ತಿ. ರುದ್ರಪ್ಪ ಹೊಸಟ್ಟಿ ಹಾಗೂ ಶಿವನಗೌಡ ಪಾಟೀಲ್ ಪತ್ನಿ ಶೈಲಾ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಆರೋಪ ಕೇಳಿಬಂದಿದೆ. ರುದ್ರಪ್ಪ ಜೊತೆಗಿನ ಸಂಬಂಧ ಬಿಟ್ಟುಬಿಡು ಎಂದು ಪತಿ ಶಿವನಗೌಡ ಪಾಟೀಲ್ ಪತ್ನಿಗೆ ಬುದ್ಧಿ ಹೇಳಿದ್ದನಂತೆ. ಆದರೂ ಆತನ ಜೊತೆ ಅಕ್ರಮ ಸಂಬಂಧ ಹೊದ್ದಿದ್ದಳಂತೆ. ಮೂವರನ್ನು ಬಿಟ್ಟು ಬೇರೆ ಯಾರಿಗೂ ಶೈಲಾಳ ಅಕ್ರಮ ಸಂಬಂಧವಾಗಲಿ, ಪತಿಯನ್ನೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದಾಗಲಿ ಗೊತ್ತಿರಲಿಲ್ಲ.
ರುದ್ರಪ್ಪ ಹೊಸಟ್ಟಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸಿದ್ದ ಶೈಲಾ, ಕೊಲೆ ಮಾಡುವ ವೇಳೆ ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಲೈವ್ ಆಗಿ ವೀಕ್ಷಿಸಿದ್ದಳಂತೆ. ಕೊಲೆ ತನಿಖೆ ನಡೆಸಿದ ಪೊಲಿಸರು ಶೈಲಾ ಬಗ್ಗೆ ಅನುಮಾನಗೊಂಡು ಆಕೆಯ ಮೊಬೈಲ್ ಪರಿಶೀಲಿಸಿದಾಗ ಕೊಲೆ ದೃಶ್ಯವನ್ನು ಲೈವ್ ಆಗಿ ವೀಕ್ಷಿಸಿದ್ದ ಬಗ್ಗೆ ಬಯಲಾಗಿದೆ.
ಏ.2ರಂದು ತನ್ನನ್ನು ತವರಿಗೆ ಬಿಟ್ಟುಬರುವಂತೆ ಶೈಲಾ ಪತಿಯನ್ನು ಕೇಳಿದ್ದಳು. ಅದರಂತೆ ಶಿವನಗೌಡ ಪತ್ನಿಯನ್ನು ತವರಿಗೆ ಬಿಟ್ಟುಬಂದಿದ್ದ. ಶೈಲಾ ಹಾಗೂ ರುದ್ರಪ್ಪ ಮೊದಲೇ ಪ್ಲಾನ್ ಮಾಡಿದಂತೆ ರುದ್ರಪ್ಪ ಶಿವನಗೌಡನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಖಾನಾಪುರ ಪೊಲೀಸರು ಶೈಲಾ ಹಾಗೂ ರುದ್ರಪ್ಪ ಹೊಸಟ್ಟಿ ಇಬ್ಬರನ್ನು ಬಂಧಿಸಿದ್ದಾರೆ.