ಕರ್ನಾಟಕ ಸರ್ಕಾರ ಪ್ರತಿ ತಿಂಗಳ ಮೊದಲ ಶನಿವಾರ ಎಲ್ಲಾ ಸರ್ಕಾರಿ ಅಧಿಕಾರಿಗಳು/ ನೌಕರರು ಕಡ್ಡಾಯವಾಗಿ ಖಾದಿ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂದು ಸುತ್ತೋಲೆಯನ್ನು ಹೊರಡಿಸಿದೆ.
ಶನಿವಾರ ರಾಜ್ಯದ ಹಲವಾರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ತಾತ್ಕಾಲಿಕವಾಗಿ ಖಾದಿ ಬಟ್ಟೆ ಮಳಿಗೆಯನ್ನು ತೆರೆಯಲಾಗಿತ್ತು. ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸರ್ಕಾರಿ ನೌಕರರು ಖಾದಿ ಬಟ್ಟೆ ಖರೀದಿ ಮಾಡಲು ಉತ್ಸಾಹ ತೋರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ನೌಕರರು ಖಾದಿ ಉಡುಪುಗಳನ್ನು ಖರೀದಿಸಲು ಅನುಕೂಲವಾಗುವಂತೆ ಹುಬ್ಬಳ್ಳಿ ಯ ಖಾದಿ ಹುಟ್ಟುವಳಿ ಕೇಂದ್ರದಿಂದ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ತಾತ್ಕಾಲಿಕ ಮಳಿಗೆಯನ್ನು ತೆರೆಯಲಾಗಿತ್ತು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆಯಂತೆ ರಾಜ್ಯದ ಎಲ್ಲಾ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ನಿಗಮ/ ಮಂಡಳಿ/ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ ಅಧಿಕಾರಿ/ ನೌಕರರು ‘ಸ್ವಯಂ ಪ್ರೇರಣೆಯಿಂದ’ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪು ಧರಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಆದ್ದರಿಂದ ಸರ್ಕಾರಿ ಅಧಿಕಾರಿಗಳು ಖಾದಿ ಬಟ್ಟೆ ಖರೀದಿಗೆ ಉತ್ಸಾಹ ತೋರಿಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಅವರು ಡಿಸಿ ಕಚೇರಿ ಆವರಣದ ಮಳಿಗೆಗೆ ಭೇಟಿ ನೀಡಿ, ಸಾಂಕೇತಿಕವಾಗಿ ಸರ್ಕಾರಿ ನೌಕರರಿಗೆ ಖಾದಿ ಉಡುಪು ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಅತ್ಯಂತ ಉತ್ಸಾಹದಿಂದ ಖಾದಿ ಉಡುಪುಗಳನ್ನು ಖರೀದಿಸಿದರು. ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ ನಾಯ್ಕ, ಉಪಾಧ್ಯಕ್ಷ ರಮೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಒಂದು ದಿನ ಮಳಿಗೆ ತೆರೆಯುವಂತೆ ಸೂಚನೆ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ದಿನಾಂಕ 07-02-2026ರಿಂದ ಶನಿವಾರ ಜಿಲ್ಲಾಧಿಕಾರಿಯವರ ಕಛೇರಿ ಆವರಣದಲ್ಲಿ ತಾತ್ಕಾಲಿಕವಾಗಿ ಒಂದು ದಿನ ಮಳಿಗೆ ತೆರೆದು ವ್ಯಾಪಾರ ನಡೆಸುವ ಕುರಿತು ಪ್ರಕಟಣೆ ಹೊರಡಿಸಿತ್ತು.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಸತ್ತೋಲೆ ದಿನಾಂಕ 27-01-2026ರ ಮೇರಗೆ ಎಲ್ಲಾ ಸರ್ಕಾರಿ ನೌಕರರು ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆ ಧರಿಸುವ ಸಂಬಂಧ ಆದೇಶವಾಗಿರುತ್ತದೆ.
ತಮ್ಮೊಂದಿಗೆ ಖಾದಿ ಮಂಡಳಿಯ ಅಧಿಕಾರಿಗಳು ದಿನಾಂಕ 05-02-2026ರಂದು ಚರ್ಚಿಸಿದಂತೆ ಪ್ರಾಥಮಿಕ ಹಂತವಾಗಿ ದಿನಾಂಕ 07-02-2026 ರಂದು ಬೆಳಗ್ಗೆ 10.00 ರಿಂದ 5.30 ರವರೆಗೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಖಾದಿ ಬಟ್ಟೆ ಮತ್ತು ಸಿದ್ಧ ಉಡುಪುಗಳನ್ನು ಮಾರಾಟ ಮಾಡಲು ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.
ಆದ್ದರಿಂದ ಸಂಬಂಧಪಟ್ಟ ಜಿಲ್ಲೆಗಳಲ್ಲಿ ತಮ್ಮ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿ ಖಾದಿ ಸಿದ್ದ ಉಡುಪುಗಳ ಮಾರಾಟದಲ್ಲಿ ಪಾಲ್ಗೊಂಡು ಖರೀದಿ ಮಾಡಿಕೊಳ್ಳವಂತೆ ತಾವು ಸೂಚನೆಯನ್ನು ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಕೈಜೋಡಿಸುವಂತೆ ವಿನಂತಿಸಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರಿಗೆ ಪತ್ರವನ್ನು ಬರೆಯಲಾಗಿತ್ತು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಮ್ಮ ಸುತ್ತೋಲೆಯಲ್ಲಿ ‘ಖಾದಿ’ ಕೇವಲ ಒಂದು ಉಡುಪು ಮಾತ್ರವಲ್ಲ, ಅದು ರಾಷ್ಟ್ರದ ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಿದೆ. ಪ್ರಸ್ತುತ ಖಾದಿ ನೇಕಾರರು ನೂತನ ಶೈಲಿಯ ವಿನ್ಯಾಸದಲ್ಲಿ ಉಡುಪುಗಳನ್ನು ತಯಾರಿಸಲು ಮುಂದಾಗಿದ್ದಾರೆ.
ಅಲ್ಲದೇ, ಖಾದಿ ಉತ್ಪಾದನೆಯು ಗ್ರಾಮೀಣ ಆರ್ಥಿಕತೆಯ ಮೂಲ ಆಧಾರವಾಗಿದ್ದು, ರಾಜ್ಯದ ಸಾವಿರಾರು ಗ್ರಾಮೀಣ ನೂಲುಗಾರರು ಮತ್ತು ನೇಕಾರರಿಗೆ ನೇರ ಹಾಗೂ ಪರೋಕ್ಷವಾಗಿ ಜೀವನೋಪಾಯವನ್ನು ಒದಗಿಸುತ್ತಿದೆ ಎಂದು ಹೇಳಿದ್ದರು.
ಆದುದರಿಂದ, 77ನೇ ಗಣರಾಜೋತ್ಸವದ ಶುಭಸಂದರ್ಭದಲ್ಲಿ ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ ಹೋರಾಟದೊಂದಿಗೆ ಮರುಸಂಪರ್ಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಅದರಂತೆ, ರಾಜ್ಯದ ಎಲ್ಲಾ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ನಿಗಮ/ ಮಂಡಳಿ/ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ ಅಧಿಕಾರಿ/ ನೌಕರರುಗಳು ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದು ಅಲ್ಲದೇ, ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ತಮ್ಮ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲು ಕೋರಿದೆ.
ಈ ಕ್ರಮವು ಸರ್ಕಾರಿ ಅಧಿಕಾರಿ/ ನೌಕರರುಗಳಲ್ಲಿ ಸ್ವದೇಶಿ ಉತ್ಪನ್ನಗಳ ಬಗ್ಗೆ, ಗೌರವ, ಐಕ್ಯತೆ, ರಾಷ್ಟ್ರೀಯ ಭಾವನೆ, ಭಾರತೀಯತೆ, ಸ್ವಾಭಿಮಾನ ಮತ್ತು ಸಾಮಾಜಿಕ ಜವಾಬ್ದಾರಿಯ ಭಾವನೆಯನ್ನು ಬೆಳೆಸುವಲ್ಲಿ ಸಹಾಯಕವಾಗಲಿದೆ ಎಂದು ಭಾವಿಸಿದೆ ಎಂದು ತಿಳಿಸಿದ್ದರು.
ಎಲ್ಲಾ ಜಿಲ್ಲೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 176 ಖಾದಿ ಸಂಘ-ಸಂಸ್ಥೆಗಳ ಹೆಸರು, ವಿಳಾಸ ಹಾಗೂ ಉತ್ಪನ್ನಗಳ ವಿವರಗಳನ್ನು https/khadikarnataka.gov.in ದಲ್ಲಿ ಪಡೆಯಬಹುದಾಗಿದೆ ಎಂದು ಹೇಳಿದ್ದರು.

