ಕೇರಳದ ತ್ರಿಶೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ರಸ್ತೆಯ ಮಧ್ಯದಲ್ಲಿ ಸಿಲುಕಿದ್ದ ಗಾಯಗೊಂಡ ಬೆಕ್ಕನ್ನು ರಕ್ಷಿಸಲು ಹೋದ 41 ವರ್ಷದ ವ್ಯಕ್ತಿಯೊಬ್ಬರು ಟ್ರಕ್ ಹರಿದು ಸಾವನ್ನಪ್ಪಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ತ್ರಿಶೂರಿನ ಮಣ್ಣುತಿ ಪ್ರದೇಶದ ಬಳಿ ನಡೆದಿದೆ. ಈ ದುರಂತ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಮೃತ ವ್ಯಕ್ತಿಯನ್ನು ಸಿಜೊ ಚಿಟ್ಟಿಲಪಿಲ್ಲಿ ಎಂದು ಗುರುತಿಸಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸಿಸಿ ಟಿವಿ ದೃಶ್ಯಾವಳಿಯಲ್ಲಿ, ರಸ್ತೆಯಲ್ಲಿ ಗಾಯಗೊಂಡ ಬೆಕ್ಕನ್ನು ನೋಡಿದ ತಕ್ಷಣ ಚಿಟ್ಟಿಲಪಿಲ್ಲಿ ಬೆಕ್ಕನ್ನು ರಕ್ಷಿಸಲು ಧಾವಿಸಿರುವುದು ಕಂಡುಬರುತ್ತದೆ.
ಚಿಟ್ಟಿಲಪಿಲ್ಲಿ ಬೆಕ್ಕಿನ ಕಡೆಗೆ ಧಾವಿಸಿದ ತಕ್ಷಣ, ಆ ಪ್ರಾಣಿ ರಸ್ತೆಯ ಇನ್ನೊಂದು ಬದಿಗೆ ಓಡಿದೆ ಮತ್ತು ಅತಿಯಾದ ವೇಗದಲ್ಲಿ ಬರುತ್ತಿದ್ದ ಟ್ರಕ್ 41 ವರ್ಷದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ವಾಹನವು ಚಿಟ್ಟಿಲಪಿಲ್ಲಿಯನ್ನು ಕೆಲವು ಮೀಟರ್‌ಗಳವರೆಗೆ ಎಳೆದೊಯ್ದಿದೆ.
ಮೃತ ಸಿಜೊ ಚಿಟ್ಟಿಲಪಿಲ್ಲಿ ಪ್ರಾಣಿ ಪ್ರೇಮಿಯಾಗಿದ್ದರು. ವ್ಯಕ್ತಿಯ ನೆರೆಹೊರೆಯವರ ಪ್ರಕಾರ, ಚಿಟ್ಟಿಲಪಿಲ್ಲಿ ಅವರ ಮನೆಯಲ್ಲಿ ಕನಿಷ್ಠ ಮೂರು ಬೆಕ್ಕುಗಳು ಮತ್ತು ಐದು ನಾಯಿಗಳಿದ್ದವು ಎಂದು ʼದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.
ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಈ ವಿಷಯದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
Tragic End for 42-Year-Old Man Hit by Truck While Saving Cat in Kerala pic.twitter.com/KpLixsdYXX
— Indian News Network (@INNChannelNews) April 9, 2025