HomeIndiaಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ: ವಿದೇಶದಲ್ಲಿರುವ ಕೇರಳಿಗರು ಬಂದು ಮತ ಚಲಾಯಿಸಲು ಅವಕಾಶ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ: ವಿದೇಶದಲ್ಲಿರುವ ಕೇರಳಿಗರು ಬಂದು ಮತ ಚಲಾಯಿಸಲು ಅವಕಾಶ ಕಲ್ಪಿಸಿ: ಡಿ.ಕೆ.ಶಿವಕುಮಾರ್ ಕರೆ

ತಿರುವನಂತಪುರಂ: ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡಲಾಗುವುದು. ಸರ್ಕಾರ ಹೊಣೆಗಾರಿಕೆಯಿಂದ ಕೆಲಸ ಮಾಡಲಿದ್ದು, ಕೇರಳಂ ಅಭಿವೃದ್ಧಿಗೆ ಪೂರಕವಾಗಿ ವ್ಯವಸ್ಥೆ ಬದಲಿಸಿ, ಬಂಡವಾಳ ಹೂಡಿಕೆ ತಂದು, ಉದ್ಯೋಗ ಸೃಷ್ಟಿ ಮಾಡುತ್ತೇವೆ. ಉತ್ತಮ ಕೇರಳಂ ರಾಜ್ಯಕ್ಕಾಗಿ ನಮಗೆ ಅವಕಾಶ ನೀಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ತಿರುವನಂತಪುರದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇದು ದೇವರ ನಾಡಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಆದರೆ ಇಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಚಿನ್ನದ ಕಳವು ಪ್ರಕರಣ ಏನಾಯ್ತು? ಕರ್ನಾಟಕದಲ್ಲಿ ಒಬ್ಬ ಅಧಿಕಾರಿ ಒಂದು ನಿಗಮದಲ್ಲಿ ಸ್ವಲ್ಪ ಕೋಟಿ ಹಣವನ್ನು ವರ್ಗಾವಣೆ ಮಾಡಿದ ಕಾರಣಕ್ಕೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡಿದವು. ಈ ಪ್ರಕರಣದಲ್ಲಿ ನಮ್ಮ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ 95% ಹಣವನ್ನು ವಸೂಲಿ ಮಾಡಿದರೂ ಸಿಬಿಐ, ಇಡಿ ಮಧ್ಯ ಪ್ರವೇಶ ಮಾಡಿ ನಮ್ಮ ಸಚಿವರನ್ನು ಬಂಧಿಸಿತು. ನಾವು ನಮ್ಮ ಸಚಿವರ ರಾಜೀನಾಮೆ ಕೊಡಿಸಿದರೂ ಇಷ್ಟೆಲ್ಲಾ ಹಸ್ತಕ್ಷೇಪ ಮಾಡಿದರು. ಆದರೆ ಶಬರಿಮಲೆ ಚಿನ್ನ ಕಳವು ವಿಚಾರದಲ್ಲಿ ನ್ಯಾಯಾಲಯ ಖಂಡನೆ ಮಾಡಿದರೂ ಸಿಬಿಐ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲಿಲ್ಲ ಯಾಕೆ? ಈ ಪ್ರಕರಣದಲ್ಲಿ ಸತ್ಯಾಂಶ ಹೊರಗೆ ಬಂದು ನ್ಯಾಯ ಒದಗಿಸಲಿಲ್ಲ? ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿಲ್ಲ.

ಕೇರಳಂ ಜನತೆ ಇದೆಲ್ಲವನ್ನು ನೋಡುತ್ತಿದ್ದಾರೆ. ಇಡೀ ದೇಶದ ವಿವಿಧ ಭಾಗದ ಜನರು ಬಹಳ ನಂಬಿಕೆ, ಭಕ್ತಿಯಿಂದ ಶಬರಿಮಲೆ ದೇವಾಲಯಕ್ಕೆ ಬರುತ್ತೇವೆ. ಇಲ್ಲಿ ಯಾವುದೇ ಪಕ್ಷ ಇದ್ದರೂ ದೇವಾಲಯ ಹಾಗೂ ಭಕ್ತರ ಭಾವನೆ ಗೌರವಿಸುತ್ತದೆ. ದೇವರ ಚಿನ್ನವನ್ನೇ ಕದ್ದು ಹಗರಣ ಮಾಡಿದ್ದರೂ ಪ್ರಧಾನಮಂತ್ರಿಗಳು ಈ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ ಎಂದರೆ ಇಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಎಲ್ ಡಿಎಫ್ ಸರ್ಕಾರಗಳ ನಡುವಣ ಒಳಒಪ್ಪಂದ ಏನು? ಈ ವಿಚಾರವಾಗಿ ಸ್ಥಳೀಯ ಬಿಜೆಪಿ ನಾಯಕರಿಗಿಂತ ಪ್ರಧಾನ ಮಂತ್ರಿಗಳು ಹಾಗೂ ಕೇರಳಂನ ಮುಖ್ಯಮಂತ್ರಿಗಳು ಉತ್ತರಿಸಬೇಕು. ನಾನು ಕೂಡ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮೂರ್ನಾಲ್ಕು ಬಾರಿ ಭೇಟಿ ನೀಡಿದ್ದು, ಈಗಲೂ ಭೇಟಿ ಮಾಡುತ್ತೇನೆ. ಅಯ್ಯಪ್ಪ ಸ್ವಾಮಿಯ ಮೇಲೆ ನನಗೂ ನಂಬಿಕೆ ಇದೆ” ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇರಳಿಗರು ಪ್ರಜ್ಞಾವಂತರು, ವಿದ್ಯಾವಂತರು, ನಂಬಿಕಸ್ಥರು, ಶ್ರಮಜೀವಿಗಳು. ಅವರು ಹೊರ ರಾಜ್ಯಗಳಲ್ಲಿ ದುಡಿದರೂ ತಮ್ಮ ಊರಿಗೆ ಬಂದು ಹಣ ಹೂಡಿಕೆ ಮಾಡುತ್ತಾರೆ. ಇಷ್ಟಾದರೂ ಇಲ್ಲಿನ ಸರ್ಕಾರ ಈ ವಿಚಾರವಾಗಿ ನೀತಿ ರೂಪಿಸಲು ವಿಫಲವಾಗಿದೆ. ಈ ಭಾಗದ ಅಭಿವೃದ್ಧಿ ಮಾಡಿ, ಬಂಡವಾಳ ತಂದು, ಉದ್ಯೋಗ ಸೃಷ್ಟಿಸಿ ರಾಜ್ಯದ ಜಿಡಿಪಿ ಬೆಳೆಯುವಂತೆ ಮಾಡದಿದ್ದ ಮೇಲೆ ನೀವು ಯಾವ ಕಾರಣಕ್ಕೆ ಅಧಿಕಾರದಲ್ಲಿರಬೇಕು? ಎಲ್ ಡಿಎಫ್ ಸರ್ಕಾರವನ್ನು ಕೇಂದ್ರ ಸರ್ಕಾರ ದಾಳಿ ಮಾಡುತ್ತಿಲ್ಲ, ನೀವು ಕೇಂದ್ರ ಬಿಜೆಪಿ ಸರ್ಕಾರದ ಜತೆ ಉತ್ತಮ ಬಾಂಧವ್ಯ ಹೊಂದಿದ್ದೀರಿ. ಆದರೆ ಕರ್ನಾಟಕ, ತೆಲಂಗಾಣ, ತಮಿಳುನಾಡು ಹಾಗೂ ಇತರೆ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ಆಡಳಿತದಲ್ಲಿ ಒಂದು ಸಣ್ಣ ಪ್ರಕರಣ, ಆರೋಪ ಬಂದರೂ ಕೂಡಲೇ ಎಫ್ಐಆರ್ ದಾಖಲಿಸಿ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಲಾಗುತ್ತದೆ. ಇಡಿ, ಸಿಬಿಐ, ಐಟಿ ಮಧ್ಯಪ್ರವೇಶಿಸುತ್ತದೆ. ಆದರೆ ಇಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣ ನಡೆದಿದ್ದರೂ ಯಾವುದೇ ತನಿಖೆ, ಹಸ್ತಕ್ಷೇಪವಿಲ್ಲ ಎಂದು ಹರಿಹಾಯ್ದರು.

ಕೇರಳಂ ರಾಜ್ಯಕ್ಕೆ ತಂದಿರುವ ಬಂಡವಾಳ ಹೂಡಿಕೆ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಬೇಕು. ಇಲ್ಲಿನ ಯುವಕರು ಬೇರೆ ರಾಜ್ಯ ಹಾಗೂ ದೇಶಗಳಿಗೆ ಓದಲು ಹೋದರೂ ಅವರು ತಮ್ಮ ನಾಡು, ಸಂಸ್ಕೃತಿಯನ್ನು ಪ್ರೀತಿಸುತ್ತಾರೆ. ಇಲ್ಲಿಗೆ ಬಂದು ಕೆಲಸ ಮಾಡಲು ಬಯಸುತ್ತಾರೆ. ಇಲ್ಲಿ ಕೇವಲ ಹಿರಿಯ ನಾಗರೀಕರು ಮಾತ್ರ ವಾಸಿಸುತ್ತಿದ್ದಾರೆ. ಹೊರಗೆ ಹೋಗಿ ಕೆಲಸ ಮಾಡುತ್ತಿರುವವರು ಮತ್ತೆ ತಮ್ಮ ನಾಡಿನಲ್ಲಿ ಬಂದು ಕೆಲಸ ಮಾಡಲು ಅವಕಾಶ ಕಲ್ಪಿಸುತ್ತಿಲ್ಲ ಯಾಕೆ? ನಾವು ನಮ್ಮ ರಾಜ್ಯದಲ್ಲಿ ಅನೇಕ ನೀತಿಗಳನ್ನು ರೂಪಿಸಿದ್ದ. ನಾನು ಅನೇಕ ಬಂಡವಾಳ ಹೂಡಿಕದಾರರ ಜತೆ ಚರ್ಚೆ ಮಾಡಿದಾಗ ಕೇರಳಂ ರಾಜ್ಯದಲ್ಲಿ ನೀತಿಗಳು ಉದ್ಯಮಗಳಿಗೆ ಪೂರಕವಾಗುವಂತೆ ಮುಕ್ತವಾಗಿಲ್ಲ. ಇಲ್ಲಿ ಅವಕಾಶಗಳು ಇಲ್ಲ ಎಂದು ಹೇಳುತ್ತಿದ್ದಾರೆ. ದೇಶದ ಎಲ್ಲಾ ರಾಜ್ಯಗಳು ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸುತ್ತಿವೆ. ಆದರೆ ಕೇರಳಂ ರಾಜ್ಯದಲ್ಲಿ ಇದು ಕಾಣಿಸುತ್ತಿಲ್ಲ. ಇಲ್ಲಿ ಉತ್ತಮ ನೈಸರ್ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಇದ್ದರೂ ಉದ್ಯಮಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತಿಲ್ಲ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 26 ಲಕ್ಷ ಇಂಜಿನಿಯರ್ ಗಳ ಪೈಕಿ 20% ಜನ ಕೇರಳಿಗರು. ಆರೋಗ್ಯ ಕ್ಷೇತ್ರ, ಮೆಡಿಕಲ್ ಕಾಲೇಜು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೇರಳಿಗರು ಯಶಸ್ಸು ಸಾಧಿಸಿದ್ದಾರೆ. ಆದರೆ ಕೇರಳಂ ರಾಜ್ಯ ಸರ್ಕಾರ ರಾಜ್ಯವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ವಿಫಲವಾಗಿದ್ದಾರೆ ಎಂದು ಟೀಕಿಸಿದರು.

10 ವರ್ಷಗಳ ಕಾಲ ಈ ರಾಜ್ಯ ನರಳಾಡಿದ್ದು ಸಾಕು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕೇರಳಂ ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗಿದೆ. ಆದರೂ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಉತ್ತುಂಗ ತಲುಪಿವೆ. ನಾವು ಯುಎಇಯಲ್ಲಿ ಕೆಲಸ ಮಾಡುತ್ತಿರುವ ಕೇರಳಿಗರ ಸಮೀಕ್ಷೆ ಮಾಡಿಸಿದ್ದು, 90% ಜನ ಅಧಿಕಾರದಲ್ಲಿ ಬದಲಾವಣೆ ಬಯಸಿದ್ದಾರೆ. ಎಲ್ಲರೂ ಕೇರಳಕ್ಕೆ ಬಂದು ಮತದಾನ ಮಾಡಲು ಬಯಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ, ಕೇರಳಂ ರಾಜ್ಯ ಸರ್ಕಾರವಾಗಲಿ ಇವರು ಬಂದು ಮತದಾನ ಮಾಡಲು ಅಗತ್ಯ ಸಹಕಾರ ನೀಡುತ್ತಿದೆಯೇ? ಮತದಾನ ಅವರ ಹಕ್ಕು, ಪ್ರಜಾಸತಾತ್ಮಕ ರಾಷ್ಟ್ರದಲ್ಲಿ ಅವರ ಹಕ್ಕು ಚಲಾಯಿಸಲು ಅವಕಾಶ ನೀಡಬೇಕು. ಅವರಿಗೆ ಮತದಾನ ಮಾಡಲು ಅವಕಾಶ ನೀಡದಿದ್ದರೆ ನೀವು ದೇಶಕ್ಕೆ ಯಾವ ಸಂದೇಶ ರವಾನಿಸುತ್ತಿದ್ದೀರಿ? ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಆದ ಸಿದ್ಧಾಂತ ಹೊಂದಿರುತ್ತವೆ. ಆದರೆ ಎಲ್ ಡಿಎಫ್ ಸಿದ್ಧಾಂತ ಬದಲಾಗಿದೆ. ಬಿಜೆಪಿ ಜತೆ ಸ್ನೇಹ ಬೆಳೆಸುತ್ತಿವೆ. ಪ್ರಧಾನಮಂತ್ರಿಗಳು ನಿಮ್ಮ ವಿರುದ್ಧ ತನಿಖೆ ಮಾಡುವುದಿರಲಿ, ಪ್ರಶ್ನೆಯನ್ನು ಮಾಡುತ್ತಿಲ್ಲ. ಕೇಂದ್ರ ಸರ್ಕಾರ ನಿಮ್ಮನ್ನು ರಕ್ಷಣೆ ಮಾಡುತ್ತಿದೆ. ಈ ರಕ್ಷಣೆ ರಾಜ್ಯ ಹಾಗೂ ಜನರ ಹಿತಕ್ಕೆ ಪ್ರಯೋಜನವಾಗುವಂತಿರಬೇಕೇ ಹೊರತು, ರಾಜಕೀಯ ಹೊಂದಾಣಿಕೆಗೆ ಸೀಮಿತವಾಗಬಾರದು ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನಾವು ಅನೇಕ ಹೋರಾಟ, ಪಾದಯಾತ್ರೆ ಮಾಡಿದೆವು. ಆಗ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನ ಪರದಾಟ ನೋಡಿದೆವು. ಹೀಗಾಗಿ ನಾವು ಪಂಚ ಗ್ಯಾರಂಟಿ ಯೋಜನೆ ನೀಡಿದೆವು. ನಂತರ ಅಧಿಕಾರಕ್ಕೆ ಬಂದ ಮೊದಲ ದಿನವೇ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿದೆವು. ಆಮೂಲಕ ನಾವು ಕೊಟ್ಟ ಮಾತಿನಂತೆ ನಡೆದುಕೊಂಡೆವು. 5-6 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆ ಜಾರಿ ನೀಡಿದೆವು. 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡ ಮಹಿಳೆಯರಿಗೆ ಮಾಸಿಕ 2 ಸಾವಿರ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ ಎಂದು ವಿವರಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular