ಬೆಂಗಳೂರು: ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಈ ಬಾರಿ ಹೊಸ ತಂತ್ರ ಪ್ರಯೋಗ ಮಾಡಲು ಮುಂದಾಗಿದೆ.
ಇಂಜಿನಿಯರಿಂಗ್ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಸಿಇಟಿ ಬರೆದು ಸೀಟು ಪಡೆಯುತ್ತಾರೆ. ಆದರೆ, ಕೊನೆ ಗಳಿಗೆಯಲ್ಲಿ ನಿರ್ಧಾರ ಬದಲಿಸುವುದರಿಂದ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ.
ಇದೀಗ ಪ್ರಾಧಿಕಾರ ಹೊಸ ನಿಯಮ ತಂದಿದ್ದು, ಸೀಟ್ ಬ್ಲಾಕಿಂಗ್ ಮಾಡಿದಲ್ಲಿ, ನಿರ್ಲಕ್ಷ್ಯ ತೋರಿದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇಂಜಿನಿಯರಿಂಗ್ ಸೀಟು ಪಡೆದ ವಿದ್ಯಾರ್ಥಿ ಕೊನೆ ಹಂತದಲ್ಲಿ ಸೀಟು ರದ್ದುಪಡಿಸಿದಲ್ಲಿ 5 ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಅಲ್ಲದೇ, ಸಿಇಟಿ ಪರೀಕ್ಷೆಗಳಿಂದ ಮೂರು ವರ್ಷ ವಿದ್ಯಾರ್ಥಿಯನ್ನು ಬ್ಯಾನ್ ಮಾಡಲಾಗುವುದು.
ಇಷ್ಟು ದಿನ ಶುಲ್ಕ ಪಾವತಿಸಿದ ನಂತರ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿತ್ತು. ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎನ್ನುವ ಕುರಿತಾಗಿ ಪ್ರಾಧಿಕಾರಕ್ಕೆ ಮಾಹಿತಿ ಸಿಗುತ್ತಿರಲಿಲ್ಲ. ಈಗ ಪ್ರವೇಶ ಪತ್ರದ ಬದಲು ಸೀಟು ಖಚಿತತೆ ಪತ್ರ ನೀಡಲು ಪ್ರಾಧಿಕಾರ ಕ್ರಮ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳು ಆಯ್ಕೆಯಾದ ಕಾಲೇಜಿಗೆ ಕಡ್ಡಾಯವಾಗಿ ಹೋಗಲೇಬೇಕಾಗುತ್ತದೆ. ಒಂದು ವೇಳೆ ಆ ಕಾಲೇಜಿಗೆ ಪ್ರವೇಶ ಪಡೆದುಕೊಳ್ಳದಿದ್ದಲ್ಲಿ ಆ ಸೀಟನ್ನು ಉಳಿಕೆ ಎಂದು ಪರಿಗಣಿಸಿ ಮುಂದಿನ ಸುತ್ತಿಗೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.