HomeKarnatakaಕಸ್ತೂರಿ ರಂಗನ್ ವರದಿಯಲ್ಲಿನ ಜನವಿರೋಧಿ ಅಂಶಗಳ ಕೈಬಿಡಲು ನಿರ್ಣಯ: ಸಂಸದ ಬಿ.ವೈ.ರಾಘವೇಂದ್ರ

ಕಸ್ತೂರಿ ರಂಗನ್ ವರದಿಯಲ್ಲಿನ ಜನವಿರೋಧಿ ಅಂಶಗಳ ಕೈಬಿಡಲು ನಿರ್ಣಯ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು ಗುರುತಿಸಲಾಗಿರುವ ಭೂಮಿಯನ್ನು ಹೊರತುಪಡಿಸಿ, ಉಳಿದಂತೆ ಜನವಸತಿ ಪ್ರದೇಶ, ರೈತರು ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿ, ವನವಾಸಿಗಳು ವಾಸಿಸುವ ಪ್ರದೇಶಗಳನ್ನು ಕೈಬಿಟ್ಟು ನಿರ್ಣಯ ಕೈಗೊಳ್ಳುವಂತೆ ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಕಸ್ತೂರಿ ರಂಗನ್‌ ಸಮಿತಿಯ ವರದಿಯು ಸ್ಥಳೀಯ ಜನರ ಅಹವಾಲುಗಳನ್ನು ಆಲಿಸದೆ, ಸ್ಥಳೀಯವಾಗಿರುವ ವಾಸ್ತವ ಸ್ಥಿತಿಗತಿಗಳನ್ನು ಅರಿಯದೇ ಮಾಡಿದ ವರದಿ ಇದಾಗಿದೆ ಎಂದರು.

ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಸರ್ಕಾರದ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ ರಾಜ್ಯದ ಒಟ್ಟು 20,668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದ್ದು,  ಜಿಲ್ಲೆಯ ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಮತ್ತು ತೀರ್ಥಹಳ್ಳಿ ತಾಲೂಕಿನ 447 ಗ್ರಾಮಗಳು ವರದಿಯಲ್ಲಿವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗ ಜಿಲ್ಲೆಯ ದೊಡ್ಡ ಪ್ರಮಾಣದ ಮಲೆನಾಡು ಪ್ರದೇಶ ಈ ಚರ್ಚೆಯ ಕೇಂದ್ರದಲ್ಲಿದೆ. ಮಲೆನಾಡಿನಲ್ಲಿ ಬಹುತೇಕ ಕುಟುಂಬಗಳ ಆರ್ಥಿಕ ಜೀವನ ಅಡಿಕೆ, ಕಾಫಿ, ಮೆಣಸು, ತೆಂಗು, ಭತ್ತ ಮುಂತಾದ ಕೃಷಿ ಮತ್ತು ತೋಟಗಾರಿಕೆ ಮೇಲೆ ಅವಲಂಬಿತವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಅನುಷ್ಟಾನಕ್ಕೆ ಬಂದಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದ ಜಮೀನು, ಮನೆ-ಮಠ ಕಟ್ಟಿಕೊಂಡವರು ಬದುಕು ಸಾಗಿಸುವುದು ಹೇಗೆ ಎಂಬ ಆತಂಕ ರೈತರಲ್ಲಿದೆ ಎಂದರು.

ಮಲೆನಾಡಿನ ಗ್ರಾಮಗಳಲ್ಲಿ ಕುಟುಂಬಗಳು ತಮ್ಮದೇ ಜಮೀನಿನಲ್ಲಿ ಮನೆ ಕಟ್ಟುವುದು ಸಾಮಾನ್ಯ. ದೊಡ್ಡ ಕಟ್ಟಡ ಮತ್ತು ಟೌನ್‌ಶಿಪ್ ಯೋಜನೆಗಳಿಗೆ ಕರಡು ಅಧಿಸೂಚನೆಯಲ್ಲಿ ನಿರ್ಬಂಧಗಳಿವೆ. ಇದೂ ಕೂಡ ಜನರಲ್ಲಿನ ಆತಂಕಕ್ಕೆ ಕಾರಣವಾಗಿದೆ. ಮಲೆನಾಡಿನ ಅನೇಕ ಗ್ರಾಮಗಳಿಗೆ ಇನ್ನೂ ಉತ್ತಮ ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಶಾಲೆ ಮತ್ತು ಆರೋಗ್ಯ ಮೂಲಸೌಕರ್ಯ ಅಗತ್ಯವಿದೆ. ನಿಯಮಗಳೇನಾದರೂ ಕಟ್ಟುನಿಟ್ಟಾದರೆ ಹೊಸ ರಸ್ತೆ, ದೊಡ್ಡ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಪರಿಸರ ಅನುಮತಿಗಳು ಬೇಕಾಗಬಹುದು ಎಂಬ ಮತ್ತೊಂದು ಆತಂಕವೂ ಇದೆ ಎಂದರು.

ಜಮೀನಿನ ಬಳಕೆ ಮತ್ತು ನಿರ್ಮಾಣದ ಮೇಲೆ ನಿರ್ಬಂಧ ಹೆಚ್ಚಾದರೆ ಭೂಮಿಯ ಅಭಿವೃದ್ಧಿ ಸಾಮರ್ಥ್ಯ ಮತ್ತು ಭವಿಷ್ಯದ ವಾಣಿಜ್ಯ ಬಳಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲಿಯೇ ರೈತರು ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ಸೂಕ್ಷ್ಮ ವಲಯದಿಂದ ಹೊರಗಿಡಬೇಕು. ಇಂತಹ ಅನೇಕ ಕಾರಣಗಳಿಂದಾಗಿ ಸ್ಥಳೀಯರು, ರೈತ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ವೈಜ್ಞಾನಿಕವಾಗಿ ಮರುಸರ್ವೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದ ಮಳೆ ಆಗಿರುವುದು, ಕೆರೆ-ಕಟ್ಟೆ ಕಾಲುವೆಗಳಲ್ಲಿ ನೀರಿಲ್ಲದೆ ಬರಿದಾಗಿರುವುದರಿಂದ ಜನಜಾನುವಾರುಗಳ ರಕ್ಷಣೆ, ಕುಡಿಯುವ ನೀರು, ಜಾನುವಾರುಗಳ ಮೇವು, ಅಲ್ಲದೇ ಬಹುಮುಖ್ಯವಾಗಿ ಜಿಲ್ಲೆಯ ಜನರ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಂಭಾವ್ಯ ಸಮಸ್ಯೆ-ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಅನೇಕ ಏತ ನೀರಾವರಿ ಯೋಜನೆಗಳು ಅನುಷ್ಠಾನದಲ್ಲಿದ್ದು, ಇದರಿಂದಾಗಿ ಏತ ನೀರಾವರಿ ಪ್ರದೇಶದ ವ್ಯಾಪ್ತಿಗೊಳಪಡುವ ಗ್ರಾಮಗಳ ಕೆರೆಗಳನ್ನು ತ್ವರಿತವಾಗಿ ಭರ್ತಿಗೊಳಿಸುವಂತೆ ಹಾಗೂ ನೀರನ್ನು ಎತ್ತಿ ಸಾಗಿಸಲು ವಿದ್ಯುತ್‌ ಕೊರತೆ ಎದುರಾಗದಂತೆ ಗಮನಹರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಮೆಸ್ಕಾಂನ ಅಭಿಯಂತರರು ಏತ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯಗಳಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸಹಸ್ರಾರು ಎಕರೆ ಭೂಪ್ರದೇಶದಲ್ಲಿ ಬೆಳೆ ಕಾಣದಾಗಿದೆ. ಇದರಿಂದಾಗಿ ರೈತರ ಜೀವನ ನಿರ್ವಹಣೆ ದುಸ್ತರವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಆದ್ದರಿಂದ ಸರ್ಕಾರವು ಭದ್ರಾವತಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಯ್ಕೆ ಮಾಡಿಕೊಂಡಿರುವ ಮಾದರಿಯಲ್ಲಿಯೇ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಪರಿಗಣಿಸುವಂತೆ ಅವರು ಮನವಿ ಮಾಡಿದ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಳೆ ಮಾಪನ ಕೇಂದ್ರಗಳ ಅಸಮರ್ಪಕ ಅಳತೆಯಿಂದಾಗಿ ಮಳೆಯ ವಾಸ್ತವಿಕ ವರದಿ ದಾಖಲಾಗದಿರುವುದರಿಂದ ರೈತರಿಗೆ ನೀಡಲಾಗುವ ಬೆಳೆವಿಮೆ ಪರಿಹಾರ ಸಮರ್ಪಕವಾಗಿ ನೀಡುವಲ್ಲಿ ವ್ಯತ್ಯಯಗಳಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ನ್ಯೂನತೆಗಳಾಗದಂತೆ ಹಾಗೂ ವಿಮಾ ಇಲಾಖೆಗೆ ನೀಡಲಾಗುವ ಮಾಹಿತಿಯಲ್ಲಿ ಸರಿಯಾದ ಮಾಹಿತಿಯನ್ನು ದಾಖಲಿಸಿ, ಸೂಕ್ತ ಪರಿಹಾರ ಮೊತ್ತ ಕೊಡಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೆ ಹೊಸದಾಗಿ ಏಳು ರೈಲ್ವೇ ಕ್ರಾಸಿಂಗ್‌ ಗಳು ಮಂಜೂರಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಸಕಾಲದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದ ಅವರು, ಕೋಟೆಗಂಗೂರು ರೈಲ್ವೆ ಕೋಚಿಂಗ್‌ ಡಿಪೋ ಕಾಮಗಾರಿಯನ್ನು ನವೆಂಬರ್‌ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದವರು ನುಡಿದರು.

ಶಿರಾಳಕೊಪ್ಪ-ಸೊರಬ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ಕಷ್ಟಸಾಧ್ಯವಾಗಿದೆ. ಜಿಲ್ಲೆಯಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ನಿರೀಕ್ಷಿತ ಪ್ರಗತಿ ಸಾಧಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಸಿ, ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಅನುಷ್ಟಾನಕ್ಕೆ ತರವು ಮುನ್ನ ಕೆಲವು ಮಾರ್ಪಾಡುಗಳನ್ನು ಅಗತ್ಯವಾಗಿ ಮಾಡಿಕೊಳ್ಳಲೇಬೇಕಾದ ಅಗತ್ಯವಿದೆ. ಇಲ್ಲಿ ಜನರು, ಅರಣ್ಯದಲ್ಲಿನ ವನವಾಸಿಗಳು ಹಲವು ದಶಕಗಳಿಂದ ಬದುಕು ಕಟ್ಟಿಕೊಂಡಿರುವುದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1932ಕ್ಕೂ ಮುಂಚೆ ಭೂಸ್ವಾದೀನ ಪಡೆದುಕೊಂಡ ಜಮೀನನ್ನು ಕೂಡ ಅರಣ್ಯ ಭೂಮಿ ವ್ಯಾಪ್ತಿಗೆ ಸೇರಿಸಿ ವರದಿ ನೀಡಿರುವುದು ಸರಿಯಲ್ಲ ಎಂದರು.

ಮಲೆನಾಡಿನ ಜನವಸತಿ ಪ್ರದೇಶಗಳನ್ನು ESA ವ್ಯಾಪ್ತಿಯಿಂದ ಹೊರಗಿಡಬೇಕು. ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆಗೆ ಸಂಪೂರ್ಣ ರಕ್ಷಣೆ ನೀಡಬೇಕು. ರೈತರ ಸಾಮಾನ್ಯ ಮನೆ ನಿರ್ಮಾಣಕ್ಕೆ ಅನಗತ್ಯ ನಿರ್ಬಂಧ ಇರಬಾರದು. ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ಯೋಜನೆಗಳಿಗೆ ವಿಶೇಷ ವಿನಾಯಿತಿ ಇರಬೇಕು. ಗ್ರಾಮವಾರು ಮಾತ್ರವಲ್ಲದೆ ಭೂಮಿಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಮರುಸರ್ವೆ ನಡೆಸಬೇಕು. ಕಾಡು ಪ್ರದೇಶ, ನದಿ ಮೂಲ ಮತ್ತು ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ಮಾತ್ರ ಕಟ್ಟುನಿಟ್ಟಾಗಿ ರಕ್ಷಿಸಬೇಕು. ಸ್ಥಳೀಯ ಗ್ರಾಮಸ್ಥರು, ರೈತರು, ಜನಪ್ರತಿನಿಧಿಗಳು ಮತ್ತು ತಜ್ಞರನ್ನು ಒಳಗೊಂಡ ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಸೇರಿದಂತೆ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular