HomeKarnatakaಮಲೆನಾಡು ಜನರ ಹಿತಕಾಯಲು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ: ಡಿ.ಕೆ. ಶಿವಕುಮಾರ್

ಮಲೆನಾಡು ಜನರ ಹಿತಕಾಯಲು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ: ಡಿ.ಕೆ. ಶಿವಕುಮಾರ್

ಶಿವಮೊಗ್ಗ: ಕಸ್ತೂರಿ ರಂಗನ್ ವರದಿಯಿಂದ ಬಾಧಿತರಾಗುವ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಸೆ. ೨೧ ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ, ಮಲೆನಾಡು ಭಾಗದ ಜನರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಶನಿವಾರ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಮತ್ತು ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಹಲವು ತಜ್ಞರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು, ಕಸ್ತೂರಿ ರಂಗನ್ ವರದಿಯ ಕುರಿತಂತೆ ಭೌತಿಕ ಸಮೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಜನರ ಸಮಸ್ಯೆಗಳನ್ನು ಅವರ ಅಭಿಪ್ರಾಯವನ್ನು ತಿಳಿದು ಕೊಂಡಿದ್ದೇನೆ. ಈ ಬಗ್ಗೆ ಸೆ. ೨೧ ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದ್ದೇನೆ.  ವಿಧಾನಮಂಡಲದ ಎರಡೂ  ಸದನದಲ್ಲಿ ಜನಪ್ರತಿನಿಧಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿ, ಮಲೆನಾಡಿನ ಕಾಡಂಚಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ನಮ್ಮ ಸರ್ಕಾರದಿಂದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ ಎಂದರು. 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮನ್ನು ಭೇಟಿ ಮಾಡಲು ಇದೊಂದು ಅವಕಾಶ. ರೈತರಿಗೆ ಒದಗಿರುವ ಅಪಾಯ ಎದುರಿಸುವ ಬಗೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಇಲ್ಲಿ ಸೇರಿದ್ದೇವೆ.  ಏನೇ ಆದರೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು. ನಮಗೂ, ಭೂಮಿ ಮತ್ತು ಪರಿಸರಕ್ಕೆ ನಂಟಿದೆ.  ನಿಮ್ಮ ಮನೆ ಬಾಗಿಲಿಗೆ ಬಂದು ಚರ್ಚಿಸಿ ನಂತರ ವಿಶೇಷ ಅಧಿವೇಶನ ನಡೆಸಿ ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು.

ಭಾವನೆಗಳ ಮೇಲೆ ರಾಜಕಾರಣ ಮಾಡಲಾಗುವುದಿಲ್ಲ, ಜನರ ಬದುಕು ಮುಖ್ಯ. ಜನರ ಸಮಸ್ಯೆಗಳಿಗೆ ಪರಿಹಾರ ಬೇಕು. ಇದೇ ಉದ್ದೇಶದಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ತಿಂಗಳಿಗೆ ಎರಡು ಬಾರಿ ಉಸ್ತುವಾರಿ ಸಚಿವರು, ಅಧಿಕಾರಿಗಳು ತಾಲ್ಲೂಕು, ಹೋಬಳಿ, ಪಂಚಾಯ್ತಿ ಮಟ್ಟಕ್ಕೆ ಹೋಗಿ ಜನರ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲು ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ ಎಂದರು.

ರೈತರು ಪರಿಸರವನ್ನು ಕಾಪಾಡಿಕೊಂಡು ಬಂದಿದ್ದೀರಿ. ನೀವು ವಲಸೆ ಹೋಗಬಾರದು. ಆದ್ದರಿಂದ ಕರಾವಳಿ ಪ್ರದೇಶ ೩೬೪ ಕಿ.ಮೀ ನೊಂದಿಗೆ ಮಲೆನಾಡ ಪ್ರದೇಶವನ್ನೂ ಸೇರಿಸಿ ಹೊಸ ಇಕೋ ಟೂರಿಸಂ ಕುರಿತು ಪ್ರವಾಸೋದ್ಯಮ ನೀತಿ ತರಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸೂಕ್ತ ಯೋಜನೆಗಳನ್ನು ರೂಪಿಸುತ್ತೇವೆ. ನಮ್ಮ ಸರ್ಕಾರ ಮಲೆನಾಡು ಜನರ ಪರವಾಗಿದೆ. ಅರಣ್ಯ ಭಾಗದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.  ಬಗರ್ ಹುಕುಂ, ಉಳುವವನಿಗೆ ಭೂಮಿ ಹಕ್ಕು ತಂದಿದ್ದು ನಮ್ಮ ಪಕ್ಷದ ಸರ್ಕಾರ. ಅಡಿಕೆ ತೆರಿಗೆ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕ ಪ್ರಸ್ತಾವನೆ ಸಲ್ಲಿಸುತ್ತೇವೆ. ೯೪ ಸಿ ವಿಷಯ ಚರ್ಚೆ ಕುರಿತಂತೆ ಪ್ರತ್ಯೇಕ ಸಭೆ ಕರೆಯುತ್ತೇನೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ರದ್ದುಪಡಿಸುವ ಬಗ್ಗೆ ಕಾನೂನಿನ ವ್ಯಾಪ್ತಿಯನ್ನು ಪರಿಶೀಲಿಸಲಾಗುವುದು ಎಂದ ಅವರು

ಅಕ್ರಮ ಸಕ್ರಮ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ಬಡವರಿಗೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಝೋನಲ್ ಮ್ಯಾನೇಜ್ಮೆಂಟ್ ಪ್ಲಾಂಟೇಷನ್ ಮಾಡಲು, ಸಂಜೀವ್ ಕುಮಾರ್ ವರದಿ ಬಗ್ಗೆ,  ಸಂವಿಧಾನದ ೩೭೧ ವಿಶೇಷ ಸ್ಥಾನ ನೀಡುವ ಬಗ್ಗೆ ಸಲಹೆಗಳು ಬಂದಿದ್ದು ಚರ್ಚಿಸುತ್ತೇನೆ.  ಹೊಸ ನೋಟಿಸ್ ಯಾವ ರೈತನಿಗೆ ಕೊಡಬಾರದು ಮತ್ತು ಹೊಸ ಒತ್ತುವರಿಗೂ ಅವಕಾಶ ನೀಡಬಾರದು ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ತೇಗದ ಸಿರಿ ಯೋಜನೆ: ಸರ್ಕಾರಿ ಜಾಗದಲ್ಲಿ ರೈತರು ತೇಗ ಬೆಳೆಯಲು ಅವಕಾಶ ಕಲ್ಪಿಸಲಾಗುವುದು.   ಈ ರೀತಿ ಬೆಳೆದ ತೇಗದಲ್ಲಿ ಶೇ. ೭೦ ರಷ್ಟು ಆದಾಯ ರೈತರಿಗೆ  ಹಾಗೂ, ಶೇ.೩೦ ಸರ್ಕಾರಕ್ಕೆ ಎಂಬ ಅಂಶಗಳನ್ನೊಳಗೊಂಡಂತೆ “ತೇಗದ ಸಿರಿ” ಎಂಬ ಹೊಸ ಯೋಜನೆ ರೂಪಿಸಲಾಗುತ್ತಿದೆ.  ಈ ರೀತಿ ಜನರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿ, ಮಲೆನಾಡು ಭಾಗದ ಜನರ ಆತಂಕ ನಿವಾರಿಸುವ ಕೆಲಸವನ್ನು ಮಾಡುತ್ತೇವೆಂದು ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.  ಮನೆ, ಭೂಮಿ ಹೊಂದಿರುವ ಅರಣ್ಯವಾಸಿಗಳಿಗೆ ತೊಂದರೆ ಕೊಡುತ್ತಿರುವ ಕೇಂದ್ರದ ನಿಲುವನ್ನು ಧಿಕ್ಕರಿಸಬೇಕಿದೆ. ಗುಟ್ಕಾದಿಂದಲ್ಲ ಬದಲಾಗಿ ಕೇಂದ್ರದ ಸೇಲ್ಸ್ ತೆರಿಗೆಯಿಂದ ತೊಂದರೆಯಾಗಿದೆ.  ೧೯೯೦ ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ನೀಡಿದ ಉಚಿತ ವಿದ್ಯುತ್ ನಿಂದ ೧.೪೮ ಲಕ್ಷ ಜನರು ೧೪ ಸಾವಿರ ಹೆ. ನಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ.  ಈಗಿನ ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ. ನಮ್ಮ ಹಕ್ಕುಗಳ ರಕ್ಷಣೆಗಾಗಿ ನಮ್ಮ ಊರಿಗೆ ಬಂದಿದ್ದಾರೆ. ರೈತರಿಂದ ಪರಿಸರ ಉಳಿದಿದೆ ಎಂದ ಅವರು ಇತ್ತೀಚೆಗೆ ತೀರ್ಥಹಳ್ಳಿ ಹೊರವಲಯದಲ್ಲಿ ಮಣ್ಣು ಕುಸಿತದಿಂದ ಮರಣ ಹೊಂದಿದ ಮೂರು ಜನರ ಮತ್ತು ಅವರ ಅವಲಂಬಿತರಿಗೆ ನಿವೇಶನ ಕೊಡಿಸಲು ಮತ್ತು ವಿಶೇಷ ಆರ್ಥಿಕ ನೆರವಿಗೆ ಮನವಿ ಮಾಡಿದರು.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ.  ಅದನ್ನು ತಿರಸ್ಕರಿಸಲು ನಾವು ನಿರ್ಧರಿಸಿದ್ದೇವೆ.  ಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಅರಣ್ಯ ವಿಷಯಗಳ ಕುರಿತು ಇಲ್ಲೇ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ಅಧಿಸೂಚನೆಯಾಗಬೇಕಿದೆ. ಜನ, ಅರಣ್ಯ, ವನಮೂಲ, ಪ್ರಾಣಿ ಸಂಕುಲ ಎಲ್ಲ ಉಳಿಯಬೇಕು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಸಾರ್ವಜನಿಕರ ಪರವಾಗಿರಲಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕಿನ ಗ್ರಾಮಗಳು ಸೇರಿದಂತೆ ೪೦೦ ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಒಳಪಟ್ಟಿದ್ದು, ಆಕ್ಷೇಪಣೆ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.  ಜನರ ಹಿತ ಕಾಪಾಡುವ ಜವಾಬ್ದಾರಿ ಕೇಂದ್ರ, ರಾಜ್ಯ ಸರ್ಕಾರಗಳ ಮೇಲಿದೆ. ಹಿಂದೆಯೂ ಅಧಿಸೂಚನೆಗಳಿಗೆ ಈ ಹಿಂದಿನ ಮುಖ್ಯಮಂತ್ರಿಗಳು ಸರಿಯಾದ ಉತ್ತರ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿ ಅಪ್ರಸ್ತುತ ಎಂದು ತಿಳಿಸಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಲೇ ಬರಲಾಗಿದೆ.  ಪ್ರಸ್ತುತ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮಲೆನಾಡಿನಲ್ಲಿ ಭೌತಿಕ ಸರ್ವೇ ಆಗಬೇಕು. ಒಟ್ಟಾಗಿ, ಒಂದಾಗಿ ವರದಿ ವಿರುದ್ದ ಹೋರಾಟ ಮಾಡೋಣ, ಸರಿಯಾದ ದಾಖಲಾತಿಗಳನ್ನು ಕೇಂದ್ರಕ್ಕೆ ನೀಡಿ ಮನವರಿಕೆ ಮಾಡೋಣ ಎಂದರು.

 ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಅಧಿಸೂಚನೆಗಳು ಸಾಕಷ್ಟು ಬಾಧೆ ನೀಡುತ್ತಿವೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳಲ್ಲಿ ವಿದೇಶಿ ಕೈವಾಡ ಇರುವ ಬಗ್ಗೆ ಮಾತುಗಳಿದ್ದು ಈ ಬಗ್ಗೆ ವಿಸ್ತೃತ ಪರಿಶೀಲನೆ ಆಗಬೇಕಿದೆ. ಬಗರ್ ಹುಕುಂ ಹಕ್ಕು ಪತ್ರ ಪಡೆದಿದ್ದು ಇದನ್ನು ರದ್ದುಪಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಶರಾವತಿ ಮುಳುಗಡೆಗೆ ಪರಿಹಾರ ನೀಡಬೇಕಿದೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಜಾರಿಯಾಗದಿದ್ದರೂ ಅರಣ್ಯ ಇಲಾಖೆ ಸೂಕ್ಷ್ಮ ಪ್ರದೇಶದಂತೆ ನೋಡುತ್ತದೆ. ವರದಿಯಿಂದ ಎದುರಾಗುವ ಸಮಸ್ಯೆಗಳು, ಬದುಕನ್ನು ಕಸಿಯುವ ಪ್ರಯತ್ನಕ್ಕೆ ಶಾಶ್ವತ ಪರಿಹಾರ ನೀಡಬೇಕು. ಶೇ.೭೦ ಅಡಿಕೆ ಬೆಳೆಗಾರರು ಇಲ್ಲಿದ್ದು, ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕು. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಕೋ ಟೂರಿಸಂ ಗೆ ಅವಕಾಶ ಮಾಡಿಕೊಡಬೇಕು. ನಗರದ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿದ್ದು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ಯನ್ನು ಮಂಜೂರು ಮಾಡಬೇಕೆಂದು ಮನವಿ ಮಡಿದರು.

 ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತು ೭ ನೇ ಬಾರಿ ಕರಡು ಅಧಿಸೂಚನೆ ನೀಡಿದೆ.  ನೂರಾರು ವರ್ಷದಿಂದ ಬದುಕುತ್ತಿರುವವರಿಗೆ ವರದಿ ಅನ್ಯಾಯ ಮಾಡುತ್ತಿದೆ. ಶರಾವತಿ ಸಂತ್ರಸ್ತರಿಗೆ, ಮಾಣಿ ಸಂತ್ರಸ್ತರಿಗೆ ನ್ಯಾಯ ಒದಗಿಲ್ಲ. ಇದಕ್ಕೆಲ್ಲ ಮುಖ್ಯಮಂತ್ರಿಗಳು ವಿಶೇಷ ಗಮನ ಕೊಡಬೇಕೆಂದು ಮನವಿ ಮಾಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಇಲ್ಲಿನ ಜನರ ಮಾರಣ ಹೋಮ ಆಗಲಿದೆ. ಇದನ್ನು ತಡೆಯಲು ಪಾದಯಾತ್ರೆ ಕೈಗೊಳ್ಳಲಾಯಿತು. ಮಲೆನಾಡಿನ ಜನ ಅನೇಕ ಸವಾಲು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಹಂದಿ, ಆನೆ, ಮಂಗಗಳ ಕಾಟಕ್ಕೆ ಜನ ಊರು ಬಿಡುವ ಮಟ್ಟಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿ ೪೪೦ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಗಾಗಿರುವುದು ಶೋಚನೀಯ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ವೇ ಮಾಡಿ ಸುಪ್ರೀಂ ಕೋರ್ಟ್ ಗೆ ಕಳುಹಿಸಲಾಗಿದೆ. ಸಮರ್ಪಕ ನ್ಯಾಯ ಒದಗಬೇಕಿದೆ ಎಂದರು.

ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ರಾಜ್ಯದ ೧೦ ಜಿಲ್ಲೆಯ ವ್ಯಾಪ್ತಿಯ ಸುಮಾರು ೪೫೭೬ ಗ್ರಾಮಗಳಿಗೆ ತೊಂದರೆಯಾಗಲಿದೆ. ಇದು ಜಾರಿಯಾದರೆ ಇಲ್ಲಿನ ಜನ ಜೀವನ ದುಸ್ತರವಾಗುತ್ತದೆ. ಮುಖ್ಯಮಂತ್ರಿಗಳು ಗಂಭೀರ ಆಲೋಚನೆ ಮಾಡಿ, ಶಾಶ್ವತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಹೋರಾಟಗಳು ನಡೆದಿದ್ದು, ಕಸ್ತೂರಿ ರಂಗನ್  ವರದಿ ಕುರಿತು ಉತ್ತಮ ನ್ಯಾಯ ಒದಗಲಿದೆ ಎಂಬ ಭರವಸೆ ಇದೆ. ಶರಾವತಿ ಮುಳುಗಡೆಯಿಂದ ಈಗಾಗಲೇ ಸಂಕಟದಲ್ಲಿರುವವರಿಗೇ ಕಸ್ತೂರಿ ರಂಗನ್ ವರದಿ ತೂಗುಗತ್ತಿ ಎದುರಾಗಿದ್ದು, ಈ ಸಂಬAಧ ಒಳ್ಳೆಯ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತೇವೆ ಎಂದರು.

  “ಕಸ್ತೂರಿ ರಂಗನ್ ವರದಿಯ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ನಿರ್ಧಾರವು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಪರಿಸರ ಸೂಕ್ಷ್ಮ ಪ್ರದೇಶದ ಕಾನೂನು ಜಾರಿಯು ಕೇಂದ್ರ ಸರ್ಕಾರದ ಶಾಸನವಾಗಿದ್ದು, ‘ಪರಿಸರ ಸಂರಕ್ಷಣಾ ಕಾಯ್ದೆ ೧೯೮೬’ರ ಸೆಕ್ಷನ್ ೩ರ ಪ್ರಕಾರ ಕೇಂದ್ರ ಸರ್ಕಾರಕ್ಕೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. ಈ ಹಿಂದೆ ರಾಜ್ಯ ಸರ್ಕಾರವು ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದಾಗ್ಯೂ, ರಾಜ್ಯ ಸರ್ಕಾರದ ಶಿಫಾರಸನ್ನು ಪರಿಗಣಿಸದೆ ಕೇಂದ್ರ ಸರ್ಕಾರವು ಪದೇ ಪದೇ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.  ಭೌತಿಕ ಪರಿಶೀಲನೆ ನಡೆಸದೆ ಇಡೀ ಗ್ರಾಮವನ್ನು, ಜನವಸತಿ ಪ್ರದೇಶ, ಅಡಿಕೆ-ಕಾಫಿ ತೋಟಗಳು ಹಾಗೂ ಮೂಲಭೂತ ಸೌಕರ್ಯಗಳಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವವರ ಮತ್ತು ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳು ಸೇರಿದಂತೆ ಜನ ಜೀವನ ದುಸ್ತರವಾಗಲಿದೆ.”

-ರಮೇಶ್, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ವಕೀಲರು.

——-

 

ಕರ್ನಾಟದ ಸ್ವಿಟ್ಜರ್ಲೆಂಡ್ ಆದ ತಾಲ್ಲೂಕು ಬರದ ಛಾಯೆಗೆ ಒಳಗಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೂ ಮೀರಿದ ಸ್ಥಳಗಳನ್ನು ತಾಲ್ಲೂಕು ಹೊಂದಿದ್ದು ಇವೂ ಸಹ ಬರ ಪರಿಸ್ಥಿತಿಗೆ ಒಳಗಾಗಿದೆ. ಇಂತಹ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿತಿಂದ ಯಾವ ಉಪಯೋಗವೂ ಇಲ್ಲ.

-ಕೃಷಿ ಬೆಳೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ

——

 

ಕಸ್ತೂರಿ ರಂಗನ್ ವರದಿಯಿಂದ ಎದುರಾಗುವ ಸವಾಲುಗಳು ಮತ್ತು ಶರಾವತಿ ಸಂತ್ರಸ್ತರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ಕರೆದು ರೈತರ ಸಮಸ್ಯೆ ಬಗೆಹರಿಸುತ್ತಿರುವ ಮಾನ್ಯ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳು.

-ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾಕಮ್ಮ ಹರತಾಳು

——

 

ಮಲೆನಾಡಿನ ಜನರು ಸವಾಲುಗಳಿಂದ ಬಳಲಿ ಸತ್ತು ಹೋಗಿದ್ದಾರೆ. ೧೪೯೯ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶವೆಂದು  ಅಧಿಸೂಚನೆ ಆಗಿದೆ. ೧೭ ಸಾವಿರ ಚ. ಮೀ. ಸಂರಕ್ಷಿತ ಅರಣ್ಯಾಗಿದೆ. ಈಗ ಉಳಿದಿರುವುದು ಶೇ.೨೦ ಮಾತ್ರ. ಇದನ್ನು ಉಳಿಸಿಕೊಡಿ.  ಶರಾವತಿ ಭೂಮಿ ಕಳೆದುಕೊಂಡ ಎರಡು ತಲೆಮಾರಾದರೂ ಭೂಮಿ ಸಿಕ್ಕಿಲ್ಲ. ವರದಿಯನ್ನು೩ ವರ್ಷವಾದರೂ ದೆಹಲಿಗೆ ತಲುಪಲಿಲ್ಲ. ಕೂಡಲೇ ವರದಿ ತಲುಪುವಂತೆ ಮಾಡಬೇಕು. ರೈತರ ೨.೪೫  ಅರ್ಜಿ ವಜಾ ಮಾಡಿ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ರೀತಿಯ ಹಲವಾರು ಸಮಸ್ಯೆಗಳಿದ್ದು ಮುಖ್ಯ ಮಂತ್ರಿ

-ಸಾಗರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್

——

 

ಇಲ್ಲಿ ಭೌತಿಕ ಸರ್ವೇ ಬೇಡ. ಇದೊಂದು ವಿದೇಶಿ ಪಿತೂರಿ. ನಾವು ಗುಡ್ಡಗಾಡಿನ ಜನ. ೩-೪ ಶತಮಾನದಿಂದ ನಮ್ಮನ್ಬು ಹೊರತಳ್ಳಲು ನಿರಂತರ ಪ್ರಯತ್ನ ನಡೆದಿದೆ. ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು ೧೦ ಪಟ್ಟು  ಕಿರುಕುಳ ಹೆಚ್ಚಿಸಲು ಮಾತ್ರ ಈ ವರದಿ ಬಂದಿವೆ. ೩೭೫ ನೇ ವಿಧಿಯಡಿ  ವಿಶೇಷ ಸ್ಥಾನಮಾನ ವರದಿ

-ರಾಜೇಂದ್ರ ಕಮ್ಮಳಗಿರಿ

——

 ಕಾರ್ಯಕ್ರಮದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ರಾಜ್ಯ ಜವಳಿ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ.ಸಿಇಓ, ಹೇಮಂತ್, ಎಸ್ಪಿ ನಿಖಿಲ್, ವಿವಿಧ ಅಧಿಕಾರಿಗಳು, ಮಲೆನಾಡು ಭಾಗದ ಜನಪ್ರತಿನಿಧಿಗಳು, ರೈತ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular