ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ಜಾರಿಗೊಳಿಸಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸುವ ಯೋಜನೆ ಅಕ್ಟೋಬರ್ 1, 2025 ರಿಂದ ಜಾರಿಗೆ ಬಂದಿದೆ.
ಈ ಯೋಜನೆಗೆ ಸೇರ್ಪಡೆಯಾದ ಸರ್ಕಾರಿ ನೌಕರರ ವೇತನದಿಂದ ಮಾಸಿಕ ವಂತಿಗೆ ಕಡಿತವಾಗುತ್ತದೆ. ಆದರೆ ಪತಿ, ಪತ್ನಿ ಇಬ್ಬರು ಸರ್ಕಾರಿ ನೌಕರಿಯಲ್ಲಿದ್ದರೆ ಯಾವ ವಂತಿಗೆ ಕಡಿತವಾಗಬೇಕು ಎಂದು ಅವರು ತೀರ್ಮಾನ ಮಾಡಿ ತಿಳಿಸಬೇಕು.
ಪತಿ, ಪತ್ನಿ ಆಯ್ಕೆ ಮಾಡಲು ಅವಕಾಶವನ್ನು ಸರ್ಕಾರಿ ನೌಕರರಿಗೆ ನೀಡಲಾಗಿತ್ತು. ಆದರೆ ಈ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಈ ಪತ್ರವು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯಡಿ ಪತಿ-ಪತ್ನಿ ಇಬ್ಬರು ಸರ್ಕಾರಿ ನೌಕರರಿದ್ದಲ್ಲಿ ಒಬ್ಬರಿಗೆ ಈ ಯೋಜನೆಯಿಂದ ಹೊರಗುಳಿಯಲು ಅವಕಾಶ ಕಲ್ಪಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಪಡೆಯಲಿಚ್ಛಿಸದ ರಾಜ್ಯ ಸರ್ಕಾರಿ ನೌಕರರು HRMS ತಂತ್ರಾಂಶದ ಮೂಲಕ ಹೊರಗುಳಿಯುವ (Optout) ಅವಧಿ ಮುಕ್ತಾಯವಾಗಿರುತ್ತದೆ ಎಂದು ಹೇಳಿದ್ದಾರೆ.
ಆದರೆ, ತಂತ್ರಾಂಶದಲ್ಲಿನ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಹಾಗೂ ಈ ಯೋಜನೆಯಿಂದ ಹೊರಗುಳಿಯಲು ಸಾಧ್ಯವಾಗುತ್ತಿಲ್ಲವೆಂದು ನೌಕರರಿಂದ ಸಂಘಕ್ಕೆ ಮನವಿಗಳು ಸಲ್ಲಿಕೆಯಾಗಿರುತ್ತವೆ ಎಂದು ತಿಳಿಸಿದ್ದಾರೆ.
- ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವ ಪ್ರಕರಣಗಳಲ್ಲಿ ಸರ್ಕಾರಿ ಆದೇಶದಂತೆ ಒಬ್ಬರು ಮಾತ್ರ ವೇತನದಲ್ಲಿ KASS ವಂತಿಗೆ ನೀಡಬೇಕಾಗಿದ್ದು, ಆದರೆ HRMS ತಂತ್ರಾಂಶದಲ್ಲಿ Optout ಮಾಡಲು ಕೆಲವರಿಗೆ ಅವಕಾಶ ಸಿಕ್ಕಿರುವುದಿಲ್ಲ. ಆದ್ದರಿಂದ ಪತಿ-ಪತ್ನಿ ಇಬ್ಬರ ವೇತನದಲ್ಲಿಯೂ ಸಹ ವಂತಿಗೆ ಕಟಾವಣೆಯಾಗುತ್ತಿರುತ್ತದೆ.
- KASS ಯೋಜನೆಗೆ ಒಳಪಡಲು ಇಚ್ಛಿಸದ ನೌಕರರು ಹೊರಗುಳಿಯಲು ನಿಗದಿತ ಕಾಲಮಿತಿಯಲ್ಲಿ, ನಿಗದಿತ ನಮೂನೆಯಲ್ಲಿಯೇ ಸಲ್ಲಿಸಿದ್ದರೂ ಸಹ D.D.0. ಗಳು ಮೊದಲು HRMS ಮೂಲಕ ಈ ಯೋಜನೆಗೆ ಕುಟುಂಬದ ಎಲ್ಲಾ ಸದಸ್ಯರನ್ನು ನೋಂದಾಯಿಸಿಕೊಂಡು ಆನಂತರ ಯೋಜನೆಯಿಂದ (Optout) ಹೊರಗುಳಿಯುವಂತೆ ಸೂಚಿಸುತ್ತಿರುವುದರಿಂದ ನೌಕರರು ಕಾಲಮಿತಿಯೊಳಗೆ ಯೋಜನೆಯಿಂದ Optout ಆಗಲು ಸಾಧ್ಯವಾಗಿರುವುದಿಲ್ಲ.
- ಪತಿ-ಪತ್ನಿಯರಲ್ಲಿ ಒಬ್ಬರು ಪೋಲಿಸ್ ನೌಕರರಾಗಿದ್ದು, ಇಂತಹ ಪ್ರಕರಣದಲ್ಲಿ ಯೋಜನೆಯಿಂದ Optout ಆಗಲು ಬಯಸಿದ್ದು, Optout ಆಗಲು ಅವಕಾಶ ಸಿಕ್ಕಿರುವುದಿಲ್ಲ.
- ಕೆಲವು ತಾಂತ್ರಿಕ ಕಾರಣಗಳಿಂದಾಗಿ ಯೋಜನೆಯಿಂದ Optout ಆಗಲು ಅವಕಾಶ ಸಿಕ್ಕಿರುವುದಿಲ್ಲ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಈ ರೀತಿಯಾಗಿರುವ ಪತಿ-ಪತ್ನಿ ಪ್ರಕರಣದ ನೌಕರರು Optout ಆಗಲು ಇಚ್ಛಿಸಿದ್ದು, ಇಂತಹ ನೌಕರರ ಸಂಖ್ಯೆ ಕಡಿಮೆ ಇರುತ್ತದೆ. ಹಾಗೂ ಹಲವಾರು ಪತಿ-ಪತ್ನಿ ನೌಕರರಲ್ಲಿ ಒಬ್ಬರು ಈಗಾಗಲೇ Optout ಆಗಿರುತ್ತಾರೆ.
ಆದ್ದರಿಂದ ದಿನಾಂಕ 25-11-2025ರೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ Optout ಆಗಲು ಮನವಿ ಸಲ್ಲಿಸಿರುವ ಪತಿ-ಪತ್ನಿ ಪ್ರಕರಣದ ನೌಕರರಿಗೆ ಒಂದು ಬಾರಿ ಮಾತ್ರ ಈ ಯೋಜನೆಯಿಂದ Optout ಆಗಲು ಅವಕಾಶ ಕಲ್ಪಿಸುವ ಸಂಬಂಧ ಮತ್ತೊಂದು ಅವಧಿಯ ಕಾಲಾವಕಾಶ ನೀಡುವಂತೆ ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

