ಬೆಂಗಳೂರು: ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಬೆಂಗಳೂರು ವತಿಯಿಂದ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ. ಅಂತೆಯೇ ಬೆಳ್ಳಿ ಪದಕ ಪಡೆದರೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಗೆದ್ದರೆ 3 ಕೋಟಿ ರೂ. ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ. ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು.
ಇದೇ ವೇಳೆ ಕ್ರೀಡಾಪಟುಗಳಿಗೆ ಸರ್ಕಾರದ ನೇಮಕಾತಿಯಲ್ಲಿಯೂ ಮೀಸಲಾತಿಯನ್ನು ಒದಗಿಸಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಹಾಗೂ ಇನ್ನುಳಿದ ಇಲಾಖೆಗಳಲ್ಲಿ ಶೇ. 2 ರಷ್ಟು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುವುದು. ಜನವರಿಯಲ್ಲಿ ಕ್ರೀಡಾಮೀಸಲಾತಿಯಡಿಯಲ್ಲಿ ಸರ್ಕಾರಿ ಉದ್ಯೋಗದ ನೇಮಕಾತಿಗೆ ಸರ್ಕಾರಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

