HomeKarnatakaGOOD NEWS : ರಾಜ್ಯದಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ; ಸಿಎಂ...

GOOD NEWS : ರಾಜ್ಯದಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ; ಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಘೋಷಣೆ ಮಾಡಿದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಈಗಾಗಲೇ 72,000 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಘೋಷಿಸಿದರು.

6 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ

ರಾಜ್ಯ ಸರ್ಕಾರವು 72,186 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿದ್ದು, ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಇಲಾಖೆಗೆ ಸೂಚಿಸಲಾಗಿದೆ. ಅಧಿಸೂಚನೆ, ಪರೀಕ್ಷೆ ಮತ್ತು ನೇಮಕಾತಿ ಆದೇಶಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕರಿಗೆ ‘ಉದ್ಯೋಗ ಸೇತು’ ಯೋಜನೆ

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ‘ಯುವ ಉದ್ಯೋಗ ಸೇತು’ ಎಂಬ ಹೊಸ ಯೋಜನೆಯನ್ನು ಆರಂಭಿಸುವುದಾಗಿಯೂ ಮುಖ್ಯಮಂತ್ರಿ ಘೋಷಿಸಿದರು. ಇದರ ಮೂಲಕ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಇದರ ಜೊತೆಗೆ ರಾಜ್ಯದ ಶಾಲೆಗಳಲ್ಲಿ 6ನೇ ತರಗತಿಯಿಂದಲೇ AI ಪರಿಚಯ, ವಿದ್ಯಾರ್ಥಿಗಳಿಗೆ AI ಮತ್ತು ಕೋಡಿಂಗ್ ಕೌಶಲ್ಯ ತರಬೇತಿ ಹಾಗೂ ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಗಳನ್ನೂ ಸಿಎಂ ಘೋಷಿಸಿದರು.

ನಾಡಿನ 7.5 ಕೋಟಿ ಕನ್ನಡಿಗರು ಹಾಗೂ ಸಮಸ್ತ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಭಾರತವನ್ನು ಒಂದು ಭವ್ಯ ದೇಗುಲಕ್ಕೆ ಹೋಲಿಸಿದರೆ ರಾಜ್ಯಗಳು ಅದರ ಭದ್ರ ಬುನಾದಿಯ ಕಂಬಗಳಿದ್ದಂತೆ. ಒಕ್ಕೂಟ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸೋಣ. ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ವೀರ ಸೈನಿಕರ ತ್ಯಾಗವನ್ನು ಸ್ಮರಿಸುತ್ತಾ, ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳಡಿ ಸರ್ವರನ್ನೂ ಒಳಗೊಂಡ ಆಡಳಿತ ನೀಡುವ ಸಂಕಲ್ಪ ನಮ್ಮ ಸರ್ಕಾರದ್ದು. ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ‘ನವ ಭಾರತ’ ಕಲ್ಪನೆಯಂತೆ “ಯುವ ಕರ್ನಾಟಕ – ನವ ಭಾರತ” ಧ್ಯೇಯದೊಂದಿಗೆ, 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ₹320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಆಡಳಿತವನ್ನು ಜನರ ಮನೆಬಾಗಿಲಿಗೆ ತರಲು ‘ಪ್ರಜಾಸೇವೆ ಇಲಾಖೆ’ ಸ್ಥಾಪಿಸಿ, ಸಚಿವರು ಮತ್ತು ಶಾಸಕರಿಂದ ನಿರಂತರ ಪ್ರಜಾಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ. ಸಾಮಾಜಿಕ ಭದ್ರತೆ ನೀಡುತ್ತಿರುವ ಪಂಚ ಗ್ಯಾರಂಟಿಗಳ ಜೊತೆಗೆ, ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು 6ನೇ ಗ್ಯಾರಂಟಿಯಾಗಿ ‘ಭೂ-ಗ್ಯಾರಂಟಿ’ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ₹77,000 ಕೋಟಿಗೂ ಅಧಿಕ ಮೊತ್ತ ನೇರ ವರ್ಗಾವಣೆಯಾಗಿದ್ದು, NFHS-6 ವರದಿಯಂತೆ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಶೇ.44 ರಿಂದ ಶೇ.14 ಕ್ಕೆ ಇಳಿಕೆಯಾಗಿದೆ. ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ಕೋಟ್ಯಂತರ ಜನರಿಗೆ ಆಸರೆಯಾಗಿವೆ. ಇದು ಕರ್ನಾಟಕ ಮಾದರಿ ಎಂದೇ ಜನಪ್ರಿಯವಾಗಿದೆ ಹಾಗೂ ಇಡೀ ರಾಷ್ಟ್ರ ಅನುಸರಿಸುತ್ತಿದೆ. ತಾಯಂದಿರ ಮರಣ ಪ್ರಮಾಣದಲ್ಲಿ ಶೇ.19 ರಷ್ಟು ಇಳಿಕೆ ಕಂಡಿದೆ.

 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ

 ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ “ಯುವ ಉದ್ಯೋಗ ಸೇತು” ಹಾಗೂ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳಿಗೆ ಮಾಸಿಕ ₹2,500 ಪ್ರೋತ್ಸಾಹಧನ ನೀಡುವ “ಉದ್ಯೋಗ ನಿಧಿ” ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣ, ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ, ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ.7.5 ವಿಶೇಷ ಮೀಸಲಾತಿ ಹಾಗೂ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ. ರೈತರಿಗಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ “ಮುಖ್ಯಮಂತ್ರಿ ರೈತ ಚೈತನ್ಯ” ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಮೇಲೆ 50% ಸಬ್ಸಿಡಿ ನೀಡುವ “ರೈತ ಮಿತ್ರ” ಯೋಜನೆ ಜಾರಿಗೊಳಿಸಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಹಾಗೂ ₹16,000 ಕೋಟಿ ಮೊತ್ತದ ಜಲಸಂಪನ್ಮೂಲ ಯೋಜನೆಗಳು ಚಾಲನೆಯಲ್ಲಿವೆ. ಎಸ್‌ಸಿ/ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬೃಹತ್ ಅನುದಾನ ಮೀಸಲಿಡಲಾಗಿದೆ. ಬೆಂಗಳೂರಿಗೆ ₹1.50 ಲಕ್ಷ ಕೋಟಿ ಮೂಲಸೌಕರ್ಯ, ₹26,000 ಕೋಟಿ ವೆಚ್ಚದ 117 ಕಿ.ಮೀ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’, 5 ಹೊಸ ಪೊಲೀಸ್ ಕಮಿಷನರೇಟ್‌ಗಳು, ಆ್ಯಂಟಿ ರೌಡಿ ಸ್ಕ್ವಾಡ್, ಲಾಲ್‌ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್‌ಗಳು ಹಾಗೂ 7 ಕೆರೆಗಳ ಪುನಃಶ್ಚೇತನ ಕೈಗೆತ್ತಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರದಲ್ಲಿ ₹20,000 ಕೋಟಿ ವೆಚ್ಚದ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್, ‘ಬಿಯಾಂಡ್ ಬೆಂಗಳೂರು’ ಅಡಿ 5 ಜಿಲ್ಲೆಗಳಲ್ಲಿ ಗ್ಲೋಬಲ್ ಟೆಕ್ ಸೆಂಟರ್‌ಗಳು ಮತ್ತು ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಸ್ಥಾಪಿಸಲಾಗುತ್ತಿದೆ. ರಾಜ್ಯದ ಪ್ರತಿಯೊಂದು ಪಟ್ಟಣ ಹಾಗೂ ನಗರದ ಪ್ರಗತಿಗೆ ರಿಂಗ್‌ ರೋಡ್ ಹಾಗೂ ಮೊಬಿಲಿಟಿ ಗ್ರಿಡ್‌ ಗಳನ್ನು ನಗರ ಯೋಜನೆಯ ಮೂಲಕ ಜಾರಿಗೆ ತರಲಾಗುವುದು. ಕನ್ನಡಕೋಟಿಯ ಕೈಗಳು ನನ್ನ ಜೊತೆ ಕೈ ಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ ಎಂದರು.

https://twitter.com/DKShivakumar/status/2088490984489578555

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular