ಬೆಂಗಳೂರು-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬಳಿಕ, ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ನಿರೀಕ್ಷಿತ ಸಚಿವ ಸ್ಥಾನ ಸಿಗದೆ ವಂಚಿತರಾಗಿರುವ ಶಾಸಕರ ಅಸಮಾಧಾನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರುಹಾಜರಿಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯನ್ನು ಬಂಡಾಯದ ಮುನ್ಸೂಚನೆ ಎಂದು ಬಣ್ಣಿಸಿರುವ ಪ್ರತಿಪಕ್ಷ ಬಿಜೆಪಿ, ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದೆ.
ಕಾಂಗ್ರೆಸ್ ಸಂಪುಟ ವಿಸ್ತರಣೆಯ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರುಹಾಜರಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೈಕಮಾಂಡ್ ಸೂಚನೆಯಂತೆ ಸಂಪುಟ ರಚನೆ ನಡೆದಿದ್ದರೂ, ಸಿದ್ದರಾಮಯ್ಯ ಅವರು ಸೂಚಿಸಿದ್ದ ಹಲವು ನಾಯಕರಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ಹಾಗೂ ಅವರ ವಿರೋಧವನ್ನೂ ಮೀರಿ ಕೆಲವರಿಗೆ ಮಣೆಹಾಕಿರುವುದು ಈ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ತಮ್ಮ ವಿರೋಧವನ್ನು ಈಗಾಗಲೇ ಹೈಕಮಾಂಡ್ ಮುಂದೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರ ಗೈರುಹಾಜರಿಯು ಪಕ್ಷದೊಳಗಿನ ಒಡಕಿಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯಿಂದ ಸರಣಿ ‘ಎಕ್ಸ್’ ಪೋಸ್ಟ್:
“ಪಿಚ್ಚರ್ ಅಭಿ ಬಾಕಿ ಹೈ” ವ್ಯಂಗ್ಯ
ಬಿಜೆಪಿಯ ಸೋಷಿಯಲ್ ಮೀಡಿಯಾ ದಾಳಿ
ಕಾಂಗ್ರೆಸ್‌ನ ಆಂತರಿಕ ಬೆಳವಣಿಗೆಗಳನ್ನು ಬಂಡವಾಳ ಮಾಡಿಕೊಂಡಿರುವ ಕರ್ನಾಟಕ ಬಿಜೆಪಿ ಘಟಕ, ಸೋಷಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಆಡಳಿತ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
“ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಸಾಲು ಸಾಲು ಶಾಸಕರ ರಾಜೀನಾಮೆಗಳು ಸಾಲು ಸರದಿಯಲ್ಲಿ ಕಾದು ಕುಳಿತಿವೆ. ಕಾಂಗ್ರೆಸ್ ಅಂದ್ರೆ ಸ್ವಾರ್ಥ..!” ಎಂದು ಬಿಜೆಪಿ ಹರಿಹಾಯ್ದಿದೆ.
“ಮಾಜಿ ಸಿಎಂ ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದು ಹುಟ್ಟುಹಬ್ಬದ ಕಾರಣದಿಂದಲೋ ಅಥವಾ ನಿಮ್ಮ ಪಟ್ಟಿಗೆ ಕ್ಯಾರೇ ಎನ್ನದ ಸಿಎಂ ಡಿ.ಕೆ. ಶಿವಕುಮಾರ್ ಅವರ ಮೇಲಿನ ಸಿಟ್ಟಿನಿಂದಲೋ?” ಎಂದು ಬಿಜೆಪಿ ನೇರ ಪ್ರಶ್ನೆÉಯಾಂದನ್ನು ಮುಂದಿಟ್ಟಿದೆ.
ಸಂಪುಟ ವಿಸ್ತರಣೆಯ ಬಿಕ್ಕಟ್ಟನ್ನು “ಕಾಂಗ್ರೆಸ್‌ನ ಆಂತರಿಕ ಬಂಡಾಯದ ಆರಂಭದ ದಿನಗಳು” ಎಂದಿರುವ ಬಿಜೆಪಿ, ಮುಂಬರುವ ದಿನಗಳಲ್ಲಿ ಆಡಳಿತ ಪಕ್ಷದಲ್ಲಿ ಮತ್ತಷ್ಟು ರಾಜಕೀಯ ಜ್ವಾಲಾಮುಖಿಗಳು ಬಾಯ್ತೆರೆಯಲಿವೆ ಎಂದು ಭವಿಷ್ಯ ನುಡಿದಿದೆ. ಅಲ್ಲದೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಕಾಳಗ ಮುಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್‌ಗೆ ಸವಾಲಾದ ಅಧಿಕಾರ ಹಂಚಿಕೆ
ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಮತ್ತು ಸಂಪುಟ ವಿಸ್ತರಣೆಯ ಪ್ರಕ್ರಿಯೆಯು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಹೈಕಮಾಂಡ್ ಎಷ್ಟೇ ಸಮನ್ವಯ ಸಾಧಿಸಲು ಯತ್ನಿಸಿದರೂ, ಶಾಸಕರ ಆಕಾಂಕ್ಷೆಗಳು ಮತ್ತು ಹಿರಿಯ ನಾಯಕರ ಅಸಮಾಧಾನಗಳು ಪಕ್ಷಕ್ಕೆ ಸವಾಲಾಗಿ ಒಡ್ಡಿಕೊಂಡಿವೆ. ವಿರೋಧ ಪಕ್ಷವಾದ ಬಿಜೆಪಿ ಈ ಬಿಕ್ಕಟ್ಟನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ.

