ಶುಕ್ರವಾರದಿಂದ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ. ನೌಕರರು ಬೆಂಗಳೂರು ಚಲೋ ಕೈಗೊಂಡಿದ್ದು, ಪ್ರತಿಪಕ್ಷವಾದ ಬಿಜೆಪಿ ಈ ಮುಷ್ಕರಕ್ಕೆ ಬೆಂಬಲ ನೀಡಿದೆ. ಮುಷ್ಕರದ ಕುರಿತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ.
ಈ ಕುರಿತು ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ನಾಡಿನ ಜೀವನಾಡಿಗಳೆನಿಸಿರುವ ನಮ್ಮ ಸಾರಿಗೆ ಕಾರ್ಮಿಕರು ಇಂದು ಸಂಕಷ್ಟದಲ್ಲಿದ್ದಾರೆ. 38 ತಿಂಗಳ ವೇತನದ ಹಿಂಬಾಕಿ ಪಾವತಿ ಹಾಗೂ ವೇತನ ಪರಿಷ್ಕರಣೆ ಕಾರ್ಮಿಕರ ಹಕ್ಕು. ಇದನ್ನು ಬಿಜೆಪಿ ಕರ್ನಾಟಕ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ತನ್ನ ಉಪೇಕ್ಷೆ, ನಿರ್ಲಕ್ಷ್ಯ ಬಿಟ್ಟು, ಕಾರ್ಮಿಕರಿಗೆ ಗೌರವ ನೀಡಿ, ಅವರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿಯಬೇಕು, ಸಾರಿಗೆ ನೌಕರರ ಹಿತರಕ್ಷಿಸಿ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪತ್ರದ ವಿವರಗಳು: ವಿಜಯೇಂದ್ರ ಪತ್ರವು ಕೆಎಸ್‌ಆರ್‌ಟಿಸಿ ಕಾರ್ಮಿಕರ 38 ತಿಂಗಳ ವೇತನ ಹಿಂಬಾಕಿ ಪಾವತಿ ಹಾಗೂ 01.01.2024ರಿಂದ ವೇತನ ಪರಿಷ್ಕರಣೆ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ರಾಜ್ಯದ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ಕಳೆದ 38 ತಿಂಗಳಿಂದ ತಮ್ಮ ನ್ಯಾಯಸಮ್ಮತ ವೇತನ ಹಿಂಬಾಕಿ ಪಡೆಯದೆ ಸಂಕಷ್ಟದ ಜೀವನ ನಡೆಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.
01.01.2024800 ಜಾರಿಗೆ ಬರಬೇಕಾಗಿದ್ದ ವೇತನ ಪರಿಷ್ಕರಣೆಯನ್ನೂ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿರುವುದು ಕಾರ್ಮಿಕ ವಿರೋಧಿ ಧೋರಣೆಯ ಸ್ಪಷ್ಟ ಉದಾಹರಣೆಯಾಗಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ ಒಕ್ಕೂಟ (ರಿ) ಕೈಗೊಂಡಿರುವ ಅಸಹಕಾರ ಚಳವಳಿ ಸಂಪೂರ್ಣ ನ್ಯಾಯಸಮ್ಮತವಾಗಿದ್ದು, ಅವರ ಹೋರಾಟಕ್ಕೆ ಭಾರತೀಯ ಜನತಾ ಪಕ್ಷ ತನ್ನ ಪೂರ್ಣ ಬೆಂಬಲವನ್ನು ಘೋಷಿಸುತ್ತದೆ.
ರಾಜ್ಯ ಸರ್ಕಾರವು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಸಾಮಾಜಿಕ ನ್ಯಾಯದ ಮೇಲಿನ ಅವಮಾನವೂ ಹೌದು.
ಕಾರ್ಮಿಕರ ಸಹನೆಗೆ ಮಿತಿ ಇದೆ ಎಂಬುದನ್ನು ಸರ್ಕಾರ ಮನಗಾಣಬೇಕು. ತಕ್ಷಣವೇ 38 ತಿಂಗಳ ವೇತನ ಹಿಂಬಾಕಿಯನ್ನು ಬಿಡುಗಡೆ ಮಾಡದೇ ಮತ್ತು ವೇತನ ಪರಿಷ್ಕರಣೆಯನ್ನು ಜಾರಿಗೊಳಿಸದೇ ಇದ್ದಲ್ಲಿ, ಈ ಹೋರಾಟವು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಸರ್ಕಾರ ಗಮನದಲ್ಲಿಡಬೇಕು.
ಆದ್ದರಿಂದ, ಸರ್ಕಾರವು ಇನ್ನಷ್ಟು ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಂಡು, ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಬೇಕೆಂದು ತೀವ್ರವಾಗಿ ಆಗ್ರಹಿಸುತ್ತೇನೆ.

