ನಿನ್ನೆ ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶಕ್ಕೂ ಮುನ್ನ ಕೇಳಿಬರುತ್ತಿದ್ದಂತೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಧ್ವಜ ಹಾರಿದ್ದು, ಬಿಜೆಪಿ ಬರೋಬ್ಬರಿ 206 ಕ್ಷೇತ್ರಗಳಲ್ಲಿ ಗೆದ್ದುಬೀಗಿದೆ.
ಅಧಿಕಾರದಲ್ಲಿದ್ದ ಟಿಎಂಸಿ ಕೇವಲ 80 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, ಅಚ್ಚರಿಯನ್ನು ಮೂಡಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಫಲಿತಾಂಶವನ್ನು ಒಪ್ಪುವುದಿಲ್ಲ, 100 ಸೀಟುಗಳ ಮೋಸ ನಡೆದಿದೆ ಎಂದು ಗಂಭೀರ ಆರೋಪ ಮಾಡಿ ಮತ ಎಣಿಕೆ ಕೇಂದ್ರದಿಂದ ಹೊರನಡೆದಿದ್ದಾರೆ.
ಹೀಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದು, ಈ ಗೆಲುವನ್ನು ವಿವಿಧ ರಾಜ್ಯಗಳ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಇತ್ತ ಕರ್ನಾಟಕದಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಂಗಾಳದ ಬಿಜೆಪಿ ಗೆಲುವನ್ನು ಸಂಭ್ರಮಿಸಲಾಗಿದೆ.
ವಿಜಯೇಂದ್ರ, ಸಿಟಿ ರವಿ, ಛಲವಾದಿ ನಾರಾಯಣ, ಆರ್ ಅಶೋಕ್ ಹಾಗೂ ಅಶ್ವತ್ಥ್ ನಾರಾಯಣ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಫೋಟೊವನ್ನು ಹಂಚಿಕೊಂಡಿರುವ ನೆಟ್ಟಿಗರು ಇದೇ ದಿನ ಘೋಷಣೆಯಾದ ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಎದುರು ತಮ್ಮದೇ ಬಿಜೆಪಿ ನೆಲಕಚ್ಚಿ ಹೀನಾಯ ಸೋಲು ಕಂಡಿದ್ದು, ಇಂತಹ ಸಮಯದಲ್ಲಿ ತಮ್ಮದಲ್ಲದ ವಿಜಯವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ನಿನ್ನೆ ಘೋಷಣೆಯಾದ ಎರಡೂ ಕ್ಷೇತ್ರಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಕಂಡಿದೆ.

