HomeLatest Newsಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ಶಿಬಿರ: ಶಾಸಕ ಕೆ.ಎಸ್. ಬಸವಂತಪ್ಪ

ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ಶಿಬಿರ: ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ: ನಗರ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳನ್ನಾಡುತ್ತಾರೆ, ಕನ್ನಡ ಭಾಷೆಯನ್ನು ಮಾತ್ರ ಮಾತನಾಡುವ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಉಳಿವು ಸಾಧ್ಯ, ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ನಿರಂತರ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ  ಮೂಡಿಸುವುದು ಅವಶ್ಯಕವಾಗಿದೆ ಎಂದು ಮಾಯಾಕೊಂಡ ವಿಧಾನಸಭಾ ಸದಸ್ಯರಾದ ಕೆ.ಎಸ್. ಬಸವಂತಪ್ಪ ತಿಳಿಸಿದರು.

ಅವರು ಭಾನುವಾರ ದಾವಣಗೆರೆ ತಾಲ್ಲೂಕು ಸಾಹಿತ್ಯ ಪರಿಷತ್ತು ಕುರ್ಕಿ-ಹಿರೇತೊಗಲೇರಿ ಗ್ರಾಮದ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದ ಬಳಿ ಎರ್ಪಡಿಸಿದ್ದ ದಾವಣಗೆರೆ ತಾಲ್ಲೂಕು 12 ನೇ ಕನ್ನಡ ಸಾಹಿತ್ಯ ಸಮ್ಮೇಳನ-2026 ಉದ್ಪಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಕನ್ನಡವನ್ನು ಬೆಳೆಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ, ತಾಲ್ಲೂಕು ಸಾಹಿತ್ಯ ಸಮ್ಮೇಳನ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ, ಕನ್ನಡ ಸಾಹಿತ್ಯ ಪರಿಷತ್ ದೇಶದಲ್ಲಿಯೇ ವಿಭಿನ್ನವಾದದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಷ್ಟೊಂದು ಶ್ರೀಮಂತಿಕೆಯನ್ನು ಒಳಗೊಂಡಿದೆ. ಕಸಾಪ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಮತ್ತು ಮುಂದಿನ ಪೀಳಿಗೆಯವರಿಗೆ ನಾವು ಕನ್ನಡ ಸಾಹಿತ್ಯ ಉಳಿಸಿ ಬೆಳೆಸಲು ಹೆಚ್ಚಿನ ಒತ್ತು ನೀಡಬೇಕಾಗಿದೆ. ರಾಜ್ಯದ ಪ್ರತಿಯೊಂದು ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನವನ್ನು ಮಾಡಿ ಕನ್ನಡ ಸಾಹಿತ್ಯದ ನಿರಂತರ ಶಿಬಿರಗಳನ್ನು ಏರ್ಪಡಿಸಬೇಕು ಎಂದರು.

 ಈಗಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ದೇವರುಗಳ ಕಡೆ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಹೆಚ್ಚಾಗಿ ನಡೆಯಬೇಕು , ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಠ್ಯಪುಸ್ತಕವನ್ನು ಇಟ್ಟು ಮಕ್ಕಳಲ್ಲಿ ಕನ್ನಡ ಸಾಹಿತ್ಯ ಅಭ್ಯಾಸಿಸಲು ಅನುಕೂಲವಾಗುವಂತಹ ಕೆಲಸ ಆಗಬೇಕಾಗಿದ್ದು ಇದಕ್ಕೆ  ಮುಖ್ಯಮಂತ್ರಿಯವರು ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ, ಇಂದು ನಾವು ಕೇವಲ ಬೆರಳಣಿಕೆಯಷ್ಟು ಸಾಹಿತಿಗಳನ್ನು ನೋಡುತ್ತಿದ್ದು ಮುಂದಿನ ದಿನಗಳಲ್ಲಿ ಓಣಿ ಓಣಿಗಳಲ್ಲಿ ಸಾಹಿತಿಗಳನ್ನು ನೋಡುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.

ಸಮಾನತೆ ಮತ್ತು ಸಹಭಾಳ್ವೆ ಬೇಕಾದಲ್ಲಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ನಾವು ಬೆಳೆಸಬೇಕು, ಆಗ ನಮ್ಮವರು ಎಂಬ ಭಾವನೆ ನಮ್ಮಲ್ಲಿ ಮೂಡಲಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ನಾವು ಹೆಚ್ಚಾಗಿ ಸಾಹಿತ್ಯವನ್ನು ಬೆಳೆಸುವಂತಹ ಕೆಲಸ ಮಾಡಬೇಕು ಎಂದರು. ಹಿರೇತೊಗಲೇರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡಿದ್ದೇನೆ. ಹಾಗೂ ಕನ್ನಡ ಸಾಹಿತ್ಯ ಪರಿಷತ್ ಒಂದು ದೇಗುಲವಿದ್ದಂತೆ, ಅಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪಾರದರ್ಶಕತೆಯಿಂದ ನಡೆಯಬೇಕು, ಅದಕ್ಕೆ ನಾವು ನೀವು ಕೈ ಜೋಡಿಸಬೇಕು ಎಂದರು.

ಸಾಹಿತಿ, ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಪ್ರಧಾನ ಭಾಷಣ ಮಾಡಿ, ಇಂದು ಏನಾದರು ಈ ದೇಶಕ್ಕೆ ಭವಿಷ್ಯವಿದ್ದರೆ ಅದು ಹಳ್ಳಿಗಳಿಂದ ಮಾತ್ರ ಸಾಧ್ಯ, ಸಾಹಿತ್ಯವೆಂದರೆ ಶಬ್ದ ಮತ್ತು ಅರ್ಥಗಳಿಂದ ಕೂಡಿದ್ದು ಕಾವ್ಯವಲ್ಲ, ಶಬ್ದ ಅರ್ಥಗಳಿಂದ ಕೂಡಿ ಸಾಹಿತ್ಯವಾಗಿರಬೇಕು ಎಂದರು.

ದುಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಅವರು ಮಾತನಾಡಿದರು, ದಾವಣಗೆರೆ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಮತಿ ಜಯಪ್ಪ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ ತೊಗಲೇರಿ ಆಶಯ ನುಡಿಗಳನ್ನಾಡಿದರು, ಬಿಐಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಬೇಂದ್ರಪ್ಪ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಗುರೂಜಿ, ಕೆ.ಬಿ.ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷರಾದ ಸಿದ್ದೇಶ್ ಕುರ್ಕಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಸಾಪ ವತಿಯಿಂದ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಮತ್ತು ಸಿದ್ದೇಶ್ ಕುರ್ಕಿ ಅವರ ಕೃತಿಗಳಾದ ವಿಜ್ಞಾನಧಾರೆ ಮತ್ತು ಸೌರಕುಟುಂಬ ನಾಟಕ, ಹೆಚ್.ಕೆ.ಸತ್ಯಭಾಮ ಮಂಜುನಾಥ್ ಅವರ ಕವನ ಸಂಕಲನ ಅಂತಃಸಾಕ್ಷಿ, ಹೆಚ್.ಎನ್.ಮಮತ ನಾಗರಾಜ್ ಅವರ ಕಿರು ನಾಟಕಗಳ ಸಂಕಲನ ಜೀವನಾಡಿ, ಪ್ರತಿಭಾ ಆರ್. ಅವರ ನೆನಪಿನ ಬುತ್ತಿ ತಾತ ಪ್ರತಿಧ್ವನಿಗಳು ಹಾಗೂ ಕೆ.ರಾಘವೇಂದ್ರ ನಾಯರಿ ಅವರ ಕುರ್ಕಿ-ಹಿರೇತೊಗಲೇರಿ ಅಪೂರ್ವ ಸಂಗಮ ನುಡಿತೇರು ಸ್ಮರಣ ಸಂಚಿಕೆಯನ್ನು ಲೋಕರ್ಪಣೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಕುರ್ಕಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಏರ್ಪಡಿಸಲಾಗಿತ್ತು. ಪ್ರಗತಿಪರ ರೈತರಾದ ಕಮಲಮ್ಮ ಗುರುಶಾಂತಪ್ಪ, ರೇವಣಸಿದ್ದಪ್ಪ ಓದೋಗೌಡರು, ವೇದಮೂರ್ತಿ ಗೌಡ್ರು ಹಾಗೂ ಇತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular