ಬೆಂಗಳೂರು: ಎಲ್ಲಾ ಇಲಾಖೆಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕು. ಸೂಚನೆ ಉಲ್ಲಂಘನೆ ಮಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿಯೇ ಆಡಳಿತ ನಡೆಸುವ ಬಗ್ಗೆ ಈಗಾಗಲೇ ಹಲಬ್ವು ಬಾರಿ ಸೂಚನೆ ನೀಡಿ, ಸುತ್ತೋಲೆ ಹೊರಡಿಸಿದರೂ ಪಾಲನೆಯಾಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ಮಾಡುತ್ತಲೇ ಇದೆ. ಈ ನಿಟ್ಟಿನಲ್ಲಿ ಕಡ್ಡಾಯವಾಗಿ ಕನ್ನಡ ಪಾಲನೆಯಾಗಬೇಕು ಎಂದು ಆದೇಶ ಹೊರಡಿಸಲಾಗಿದೆ. ಎಲ್ಲಾ ಇಲಾಖೆಯ ಕಚೇರಿಯ ನಾಮಫಲಕಗಳು, ದಾಖಲೆಗಳು ಕನ್ನಡದಲ್ಲಿಯೇ ಇರಬೇಕು. ಅರ್ಜಿ, ಪತ್ರಗಳಿಗೂ ಕನ್ನಡದಲ್ಲಿಯೇ ಉತ್ತರ ನೀಡಬೇಕು. ವಿಧಾನಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ನೇಮಕಾತಿ, ವರ್ಗಾವಣೆ, ರಜೆ ಮಂಜೂರಾತಿ ಸೇರಿದಂತೆ ಎಲ್ಲಾ ಆದೇಶಗಳನ್ನು ಕನ್ನಡದಲ್ಲಿಯೇ ಹೊರಡಿಸಬೇಕು. ಕಚೇರಿಗಳಿಗೆ ಒದಗಿಸುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ, ಅರ್ಜಿ ಕನ್ನಡದಲ್ಲಿಯೇ ಭರ್ತಿ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಭಾಷಾ ನೀತಿಯನ್ನು ಜಾರಿಗೊಳಿಸುವುದು ಅಧಿಕಾರಿಗಳು ಹಾಗೂ ನೌಕರರ ಕರ್ತವ್ಯ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಘ-ಸಂಸ್ಥೆಗಳು ಸೇರಿದಂತೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ನೌಕರರು ಕಟ್ಟುನಿಟ್ಟಿನಲ್ಲಿ ನಿಯಮ ಪಾಲಿಸಬೇಕು. ಸೂಚನೆ ಉಲ್ಲಂಘಿಸುವವರ ವಿರುದ್ಧ ವೈಯಕ್ತಿಕವಾಗಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಈ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹಕ್ಕೆ ಸ್ಪಂದಿಸಿ ಸರ್ಕಾರದ ಎಲ್ಲ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣಪ್ರಮಾಣದಲ್ಲಿ ಬಳಸುವ ಕುರಿತಂತೆ ಎಲ್ಲ ಇಲಾಖಾ ಮುಖ್ಯಸ್ಥರಿಗೆ ಕಠಿಣ ಸೂಚನೆಯನ್ನು ನೀಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ನಡೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಕಡತದಲ್ಲಿನ ಟಿಪ್ಪಣಿ ಮತ್ತು ಪತ್ರ ವ್ಯವಹಾರಗಳು ಕನ್ನಡದಲ್ಲಿ ಬಾರದಿದ್ದ ಪಕ್ಷದಲ್ಲಿ ಅಂತಹ ಕಡತಗಳನ್ನು ಹಿಂದಿರುಗಿಸಿ ಸೂಕ್ತ ಸಮಜಾಯಿಷಿಯನ್ನು ಪಡೆಯಲು ನೀಡಿರುವ ನಿರ್ದೇಶನವನ್ನು ಉಲ್ಲೇಖಿಸಿರುವುದು ಕೂಡ ಸರ್ಕಾರದ ಕನ್ನಡಪರ ನಿಲುವನ್ನು ಪ್ರಭಾವಶಾಲಿಯಾಗಿ ಅಭಿವ್ಯಕ್ತಿಸಿದೆ. ಅಧಿಕಾರಿ ವರ್ಗ ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಇನ್ನಷ್ಟು ಮುತುವರ್ಜಿಯಿಂದ ಕನ್ನಡದ ಬಳಕೆಗೆ ಮುಂದಾಗಬೇಕೆಂದು ಆಶಿಸಿದ್ದಾರೆ.
ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಮಟ್ಟದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅವಶ್ಯಕತೆಗಿಂತಲೂ ಹೆಚ್ಚಾಗಿ ಬಳಕೆಯಾಗುವ ಆಂಗ್ಲ ಭಾಷೆಯ ಕುರಿತಂತೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿ ತನ್ನ ಪ್ರತಿರೋಧವನ್ನು ದಾಖಲಿಸಿತ್ತು. ವಿಶೇಷವಾಗಿ ಕೆಡಿಪಿ ಸಭೆಗಳಲ್ಲಿ ಕಾಮಗಾರಿ ಇಲಾಖೆಗಳು ತಮ್ಮೆಲ್ಲಾ ಮಾಹಿತಿಗಳನ್ನು ಆಂಗ್ಲಭಾಷೆಯಲ್ಲಿ ಮಂಡಿಸುವುದು ಹಾಗೂ ಅದನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಅನುಮೋದಿಸುವುದು ಆಡಳಿತದಲ್ಲಿ ಕನ್ನಡ ಅನುಷ್ಠಾನದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿತ್ತು. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಕುರಿತಂತೆ ತುರ್ತು ನಿರ್ದೇಶನಕ್ಕೆ ಆಗ್ರಹಿಸಿತ್ತು.