ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕೋಲ್ಕತ್ತಾದ ಪುರಾತನ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲಿಸಿದ ಬಳಿಕ ದೇವಸ್ಥಾನದಲ್ಲಿ ಮೀನಿನ ಭೋಗ್ (ಮೀನಿನ ಪ್ರಸಾದ) ಸೇವಿಸುವ ಮೂಲಕ ಇತ್ತೀಚೆಗೆ ಆರಂಭವಾಗಿದ್ದ ಚರ್ಚೆಗೆ ತೆರೆ ಎಳೆದಿದ್ದಾರೆ.
ಶಾಕ್ತ ಹಿಂದೂಗಳಿಗೆ ಪವಿತ್ರವಾದ ‘ಕೌಶಿಕಿ ಅಮಾವಾಸ್ಯೆ’ಯ ಸಂದರ್ಭದಲ್ಲಿ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಸುವೇಂದು ಅಧಿಕಾರಿ ಅವರು, ನೆಲದ ಮೇಲೆ ಕುಳಿತು ದೇವಿಯ ಪ್ರಸಾದ ಸ್ವೀಕರಿಸಿದರು. ಈ ಪ್ರಸಾದದಲ್ಲಿ ಕಾಳಿಘಾಟ್‌ನ ಸಾಂಪ್ರದಾಯಿಕ ದೊಡ್ಡ ಮೀನಿನ ತಲೆ, ಹುರಿದ ಮೀನು ಹಾಗೂ ಬಸಂತಿ ಪುಲಾವ್ ಅಂದರೆ ಹಳದಿ ಅನ್ನ ನೀಡಲಾಗಿತ್ತು. ಕಾಳಿ ದೇವಿಗೆ ಮೀನು ಮತ್ತು ಬಲಿ ನೀಡಿದ ಮೇಕೆ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ಭಕ್ತರಿಗೆ ಪ್ರಸಾದವಾಗಿ ವಿತರಿಸುವುದು ಇಲ್ಲಿನ ಶತಮಾನಗಳ ಸಂಪ್ರದಾಯವಾಗಿದೆ.
ಇತ್ತೀಚೆಗೆ ಮಧ್ಯಪ್ರದೇಶದ ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸಾಹಾರ ಸೇವಿಸುವುದನ್ನು ತ್ಯಜಿಸಬೇಕು ಎಂದು ಬಂಗಾಳಿ ಹಿಂದೂಗಳಿಗೆ ಕರೆ ನೀಡಿದ್ದರು. ಅಲ್ಲದೆ, ಪೂಜೆಯ ವೇಳೆ ಮಾಂಸಾಹಾರ ಸೇವಿಸುವವರನ್ನು ಕಪಟಿಗಳು ಎಂದೂ ಟೀಕಿಸಿದ್ದರು. ಇದು ದುರ್ಗಾಪೂಜೆಯಲ್ಲಿ ಮಾಂಸಾಹಾರ ಸೇವಿಸುವ ಹಾಗೂ ದೇವರಿಗೆ ಮಾಂಸದ ಭೋಗ್ ಅರ್ಪಿಸುವ ಸಂಪ್ರದಾಯ ಹೊಂದಿರುವ ಬಂಗಾಳಿ ಸಮಾಜದಲ್ಲಿ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಗಿತ್ತು.
ಈ ಬೆಳವಣಿಗೆ ಬಳಿಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು, ಬಂಗಾಳಿಗಳು ಏನು ತಿನ್ನಬೇಕು, ತಿನ್ನಬಾರದು ಎಂಬುದನ್ನು ಯಾವುದೇ ಬಾಬಾಗಳು ನಿರ್ಧರಿಸಲು ಸಾಧ್ಯವಿಲ್ಲ. ಬಂಗಾಳಿಗಳು ಮೀನು-ಮಾಂಸ ತಿನ್ನುತ್ತಾರೆ, ಸ್ವಾಮಿ ವಿವೇಕಾನಂದರೇ ಇದನ್ನು ಸಮರ್ಥಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.
ಈ ಘಟನೆ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸುವೆಂದು ಅಧಿಕಾರಿ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಬನಾರಸಿ ಸೀರೆಸೀರೆಯನ್ನು ಸಮರ್ಪಿಸಿದರು. ಇದರೊಂದಿಗೆ ಭೋಗ್ ಆಗಿ ಮೀನನ್ನು ಅರ್ಪಿಸಿದರು. ಬಳಿಕ ದೇವಾಲಯದ ಆವರಣದಲ್ಲಿ ನೆಲದ ಮೇಲೆ ಕುಳಿತು ಪ್ರಸಾದವಾಗಿ ನೀಡಿದ್ದ ಮೀನಿನ ಭೋಗ್ ನ್ನು ಸೇವಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಸನಾತನಿ ಹಿಂದೂ. ಮಹಾಷ್ಟಮಿಯ ದಿನ ಮತ್ತು ಕಾರ್ತಿಕ ಮಾಸದಲ್ಲಿ ಸಾತ್ವಿಕ ಆಹಾರ ಸೇವಿಸುತ್ತೇನೆ. ಅದೇ ವೇಳೆ ಮಾತೆ ಕಾಳಿಗೆ ಅರ್ಪಿಸಲಾದ ಮೀನು ಹಾಗೂ ಮಾಂಸದ ಪ್ರಸಾದವನ್ನೂ ಸ್ವೀಕರಿಸುತ್ತೇನೆ. ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ, ಅದನ್ನು ಸ್ವೀಕರಿಸುವುದು ಅಥವಾ ಬಿಡುವುದು ಜನರಿಗೆ ಬಿಟ್ಟದ್ದು ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕಾಳಿಘಾಟ್‌ನಲ್ಲಿ ಸಾಂಪ್ರದಾಯಿಕ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಬಂಗಾಳದ ನಂಬಿಕೆ, ಪರಂಪರೆ ಮತ್ತು ಜೀವನಶೈಲಿಗೆ ಗೌರವ ನೀಡಿದ್ದಾರೆ. ಈ ಮೂಲಕ ಮಾಂಸಾಹಾರದ ಕುರಿತ ವಿವಾದ ಇಲ್ಲಿಗೇ ಮುಗಿಯಲಿ ಎಂದಿದ್ದಾರೆ.

