“ಕಲಬುರಗಿ ಜಿಲ್ಲೆಯಲ್ಲಿ ಕೃಷಿ ಉತ್ತೇಜನಕ್ಕೆ, ರೈತರಿಗೆ ಹಾಗೂ ರೈತ ಮಹಿಳೆಯರ ಸಬಲೀಕರಣಕ್ಕೆ ಬೇಕಾಗುವ ಅಗತ್ಯ ಕ್ರಮವಹಿಸುವುದರ ಜೊತೆಗೆ ಕಲಬುರಗಿ ಜಿಲ್ಲೆಯನ್ನು ಸಿರಿಧಾನ್ಯಗಳ ಹಾಗೂ ಕೃಷಿ ಹಬ್ ಮಾಡಲಾಗುವುದು” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ- 2026 ಹಾಗೂ, ಬೆಳೆ ವಿಮೆ ಪರಿಹಾರ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
“ಸಚಿವ ಸಂಪುಟದಲ್ಲಿ ವಿಮೆ ಪರಿಹಾರದ ವಿಚಾರ ಬಂದಾಗ ಬೇರೆ ಬೇರೆ ಕಡೆ ತಿರಸ್ಕಾರವಾಗಿದೆ ಕಲಬುರಗಿಗೆ ಮಾತ್ರ ಯಾಕೆ ಮಂಜೂರಾಗಿದೆ ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ, ಸರ್ಕಾರದ ಕಟ್ಟು ತಪ್ಪಿಸದೆ, ರೈತರಿಗೂ ಮೋಸವಾಗದಂತೆ ಕೃಷಿ ಅಧಿಕಾರಿಗಳು ಕೆಲಸ ಮಾಡಿದ್ದರಿಂದ ಇಷ್ಟೊಂದು ಪ್ರಮಾಣದ ವಿಮೆ ಮಂಜೂರಾಗಿದೆ” ಎಂದರು.
ತಮ್ಮ ವಿರುದ್ದ ‘ಪ್ರಿಯಾಂಕ್ ಖರ್ಗೆ ಹಠಾವೋ ಕಲಬುರಗಿ ಬಚಾವೋ’ ಪ್ರತಿಭಟನೆ ಮಾಡಲು ಕೆಲವರು ಮುಂದಾಗಿರುವುದರ ಕುರಿತು ಪ್ರಸ್ತಾಪಿಸಿದ ಸಚಿವರು, “ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ರೈತರಿಗೆ ಅನ್ಯಾಯ ಮಾಡುತ್ತಿದೆ. ಕನಿಷ್ಠ ಬೆಂಬಲ ಬೆಲೆ, ರೈತರ ಆದಾಯ ದುಪ್ಪಟ್ಟು ಭರವಸೆಗಳು ಹಾಗೆ ಉಳಿದವು. ಮೂರು ಕೃಷಿ ಕಾಯ್ದೆಗಳು ಜಾರಿಗೆ ಬಂದವು ಅದರ ವಿರುದ್ದ ರೈತರು ಪ್ರತಿಭಟನೆ ಮಾಡಿದರು. ಅವರಲ್ಲಿ ಕೆಲವರು ಪ್ರಾಣ ಬಿಟ್ಟರು” ಎಂದು ಹೇಳಿದರು.
“ಕಳೆದ ಬಾರಿ ರಾಜ್ಯದ 236 ತಾಲೂಕುಗಳ ಪೈಕಿ 223 ತಾಕೂಕುಗಳಲ್ಲಿ ಬರ ಬಿದ್ದಿತ್ತು, 48 ,ಲಕ್ಷ ಹೆಕ್ಟೇರ್ ಬರಕ್ಕೆ ತುತ್ತಾಯಿತು. ಅದೇ ವರ್ಷ ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ಕೇಂದ್ರ ಸರಕಾರ ಬರ ಪರಿಹಾರ ನೀಡಲಿಲ್ಲ, ಆಗ ಕರ್ನಾಟಕದ ಸಚಿವರು ದೆಹಲಿಯಲ್ಲಿ ಪ್ರತಿಭಟನೆ ಮಾಡಬೇಕಾಯ್ತು. ಅಲ್ಲದೇ, ರಾಜ್ಯ ಸರ್ಕಾರ ಕೇಂದ್ರದ ವಿರುದ್ದ ಸುಪ್ರಿಂಕೋರ್ಟ್‌ಗೆ ಹೋಗಬೇಕಾಯ್ತು. ಆಗ ಕೋರ್ಟ್ ಛೀಮಾರಿ ಹಾಕಿದ್ದರಿಂದ ರೈತರಿಗೆ ಪರಿಹಾರ ಬಂದಿತು. ಇಷ್ಟೆಲ್ಲ ಮಾಡಿದ ಮೇಲೆಯೂ ನಮ್ಮ ವಿರುದ್ದ ಕೆಲವರು ಪ್ರತಿಭಟನೆ ಮಾಡುತ್ತಾರೆ. ಅವರು ನಿಜವಾದ ರೈತರೇ ಅಲ್ಲ, ಅವರ ಹೆಗಲಿನ ಶಾಲಿನ ಬಣ್ಣ ಆಗಾಗ ಬದಲಾಗುತ್ತಲೇ ಇರುತ್ತದೆ” ಎಂದು ಲೇವಡಿ ಮಾಡಿದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೂ 657 ಕೋಟಿ ರೂಪಾಯಿ ಬೆಳೆ ಪರಿಹಾರ ಜಿಲ್ಲೆಯ ರೈತರಿಗೆ ನೀಡಲಾಗಿದೆ. ಇದೂವರೆಗೆ ಸುಮಾರು 3.01 ಲಕ್ಷ ರೈತರು ಬೆಳೆವಿಮೆ ನೊಂದಣಿ ಮಾಡಿಸಿದ್ದಾರೆ. ಇದು ಕಳೆದ ಬಿಜೆಪಿ ಸರ್ಕಾರದ ಅವಧಿಗಿಂತ ದುಪ್ಪಟ್ಟಾಗಿದೆ. 2022-23 ರ ಸಾಲಿನಲ್ಲಿ ಜಿಲ್ಲೆಯಲ್ಲಿ ನೆಟೆ ರೋಗದಿಂದ 1.98 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿತ್ತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, 1,77,354 ರೈತರಿಗೆ ರೂ 181.86 ಕೋಟಿ ಪರಿಹಾರ ನೀಡಲಾಗಿದೆ ಎಂದರು. ಕಳೆದ ಮೂರು ವರ್ಷದಲ್ಲಿ ಬೆಳೆ ವಿಮೆ ಪರಿಹಾರ, ನೆಟೆರೋಗದಿಂದ ಬೆಳೆಹಾನಿ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಅಡಿಯಲ್ಲಿ ಒಟ್ಟು 15.46 ಲಕ್ಷ ರೈತರಿಗೆ ರೂ 2590.98 ಕೋಟಿ ಪರಿಹಾರ ಧನ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ” ಎಂದು ತಿಳಿಸಿದರು.
“ಮಹಿಳಾ ಸಬಲೀಕರಣಕ್ಕಾಗಿ ಕಲಬುರಗಿ ರೊಟ್ಟಿ ಎನ್ನುವ ವಿನೂತನ ಯೋಜನೆ ಜಾರಿಗೆ ತಂದಿದ್ದು ಮಹಿಳೆಯರಿಗೆ ರೊಟ್ಟಿ ತಯಾರಿಸುವ ಯಂತ್ರಗಳನ್ನು ಒದಗಿಸಲಾಗಿದೆ. ಈಗ ಮಹಿಳೆಯರು ಪ್ರತಿನಿತ್ಯ ಸಾವಿರಾರು ರೊಟ್ಟಿ ತಯಾರಿಸಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ರವಾನಿಸಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ಕೈಗೊಂಡ ಅಭೂತಪೂರ್ವ ಕಾರ್ಯಕ್ರಮವಾಗಿದೆ” ಎಂದರು.
“ಕೃಷಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಒತ್ತು ನೀಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 9 ಕಸ್ಟಮರ್ ಹೈರ್ ಸೆಂಟರ್, ಡ್ರೋನ್ ಸಿಂಪರಣಾಕೇಂದ್ರ, ಸಿರಿದಾನ್ಯ ಸಂಸ್ಕರಣ ಕೇಂದ್ರಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಶೀಥಲೀಕರಣ ಘಟಕ ಸ್ಥಾಪಿಸಲಾಗುತ್ತಿದೆ. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗ್ರಿಟೆಕ್ ಎಕ್ಸಲರೇಟರ್ ಸೆಂಟರ್ ಫಾರ ಎಕ್ಸಲೆನ್ಸಿ ಸ್ಥಾಪನೆ ಮಾಡಲಾಗುತ್ತಿದೆ. ಈ ಮೂಲಕ ಕಲಬುರಗಿ ಜಿಲ್ಲೆಯನ್ನು ಅಗ್ರಿಕಲ್ಚರ್ ಹಬ್ ಮಾಡಲಾಗುತ್ತದೆ” ಎಂದು ತಿಳಿಸಿದರು.

