ಬೆಂಗಳೂರು: ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಕೆ ಬಳಿಕ ವಿಧಾನಸಭೆ ಕಾಲಪದಲ್ಲಿ ಭಾಗಿಯಾಗಿದ್ದಾರೆ. ರಾಜೀನಾಮೆ ನೀಡಿದ ಬಳಿಕವೂ ವಿಧಾನಸಭೆಯಲ್ಲಿ ಸಚಿವ ಸ್ಥಾನದ ಸೀಟ್ ನಲ್ಲಿ ಕುಳಿತಿದ್ದ ರಾಜಣ್ಣ ಅವರನ್ನು ಕಂಡು ವಿಪಕ್ಷ ನಾಯಕ ಆರ್.ಅಶೋಕ್ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡುವಂತೆ ಪಟ್ಟು ಹಿಡಿದ್ದಿದ್ದಾರೆ.
ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯಿದೆ. ಹೀಗಿರುವಾಗ ಸಚಿವರಾಗಿ ಕಲಾಪದಲ್ಲಿ ಅವರು ಭಾಗಿಯಾಗಿದ್ದಾರೋ ಅಥವಾ ಶಾಸಕರಾಗಿ ಭಾಗಿಯಾಗಿದ್ದಾರಾ? ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದರು. ಇದಕ್ಕೆ ವಿಪಕ್ಷದ ಇತರ ಸದಸ್ಯರೂ ಧ್ವನಿಗೂಡಿಸಿದರು. ಈ ವೇಳೆ ಆರ್. ಅಶೋಕ್, ರಾಜಣ್ಣ ಅವರೇ ಇಲ್ಲಿ ಇರುವಾಗ ಅವರೇ ಖುದ್ದು ಉತ್ತರ ನೀಡಲಿ. ಹೇಗೆ ಇಲ್ಲಿ ಕುಳಿತಿದ್ದೀರಾ? ಮೊದಲು ಈ ಬಗ್ಗೆ ಪ್ರತಿಕ್ರಿಯಿಸಿ ನಂತರ ಚರ್ಚೆ ಆರಂಭಿಸೋಣ ಎಂದು ಒತ್ತಾಯಿಸಿದರು. ಒಂದು ಹಂತದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ಗದ್ದಲ ಆರಂಭವಾಗುತ್ತಿದ್ದಂತೆ ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜೀನಾಮೆ ನೀಡಿದ್ದೇನೋ ಇಲ್ಲವೋ ಅದರ ಬಗ್ಗೆ ಮಾತು ಬೇಡ. ಸಿಎಂ ಸದನಕ್ಕೆ ಬಂದು ಉತ್ತರಿಸುತ್ತಾರೆ. ಅಲ್ಲಿಯವರೆಗೂ ಮಾತನಾಡದಂತೆ ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದಾರೆ. ಅದಕ್ಕೆ ಸುಮ್ಮನಿದ್ದೇನೆ. ಹೇಗೆ ಕುಳಿತಿದ್ದೀರಾ ಇಲ್ಲಿ? ಹೇಗೆ ಕುಳಿತಿದೀರಾ? ನಾಚಿಕೆಯಾಗಲ್ವ ನಿಮಗೆ ಎಂದು ವಿಪಕ್ಷನಾಯಕರು ಕೇಳುತ್ತಿದ್ದಾರೆ. ಹೇಗೆ ಕುಳಿತಿದ್ದೀರಾ ನಾಚಿಕೆಯಾಗಲ್ವಾ? ಎಂಬ ಇಂತಹ ಕೀಳಿಮಟ್ಟದ ಪದ ಮಾತನಾಡುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಹೊರತು ನನಗಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಬಂದು ಹೇಳಿಕೆ ಕೊಡ್ತಾರೆ ಅಲ್ಲಿಯವರೆಗೂ ಮಾತನಾಡಡಿ ಎಂದು ನನಗೆ ಸಂಸದೀಯ ಸಚಿವರು ಹೇಳಿದ್ದಾರೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.