ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರ ಇಂದು ವಿಧಾನಮಂಡಲ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿದೆ. ರಾಜೀನಾಮೆ ಗೊಂದಲದ ಬಗ್ಗೆ ಸ್ವತಃ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೇ ಸ್ಪಷ್ಟನೆ ನೀಡಿದರೂ ಸದನದಲ್ಲಿ ಪದೇ ಪದೇ ವಿಷಯ ಚರ್ಚೆಗೆ ಬಂದಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ರಹಸ್ಯದ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದರು.
ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದು, ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೂ ತರದೇ ಇಲಕಹೆಯ ಅಧಿಕಾರಿಗಳ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಈ ನಡೆಗೆ ಬೇಸತ್ತ ಸಚಿವ ಜಾರ್ಜ್, ರಾಜೀನಾಮೆಗೆ ಮುಂದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನೂ ನೀಡಿದ್ದರು ಎನ್ನಲಾಗಿದೆ.
ಇದೇ ವಿಚಾರ ಇಂದು ವಿಧಾನಸಭೆಯಲ್ಲಿ ಚರ್ಚೆಯಾಯಿತು. ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದು, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡು ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ ಮಾತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಇಂಧನ ಸಚಿವರು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಕೆ.ಜೆ.ಜಾರ್ಜ್, ನಾನು ರಾಜೀನಾಮೆ ನೀಡಿಲ್ಲ, ಇದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿ. ಮಾಧ್ಯಮಗಳ ಸೃಷ್ಠಿ. ನನಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅಂತಹ ಯಾವುದೇ ಸಮಸ್ಯೆಗಳೂ ಇಲಾಖೆಯಲ್ಲಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಧ್ಯಮದವರಿಗೆ ಗಂಟೆಗೊಂದು ನ್ಯೂಸ್ ಬೇಕು. ಈ ಹಿಂದೆ ದಿನಕ್ಕೆ ಮೂರು ನ್ಯೂಸ್ ಗಳು ಮಾತ್ರ ಇದ್ದವು. ಆದರೀಗ ನ್ಯೂಸ್ ಚಾನಲ್ ನಲ್ಲಿ ಗಂಟೆಗೊಂದು ನ್ಯೂಸ್ ಇರುತ್ತದೆ. ಹಾಗಾಗಿ ಅವರಿಗೆ ಸುದ್ದಿಬೇಕು. ಬ್ರೇಕಿಂಗ್ ನ್ಯೂಸ್ ಆಗಬೇಕು. ಹಾಗಾಗಿ ಅವರೇ ಇಂತಹ ಸುದ್ದಿ ಸೃಷ್ಟಿಸುತ್ತಿದ್ದಾರೆ ಎಂದು ಮಾದ್ಯಮಗಳ ಮೇಲೆ ಆರೋಪ ಮಾಡಿದ್ದರು. ನಾನು ಯಾವುದೇ ರಾಜೀನಾಮೆ ನೀಡಿಲ್ಲ. ಇಂಧನ ಇಲಾಖೆಯಲ್ಲಿ ಯಾವ ಹಸ್ತಕ್ಷೇಪವೂ ಅಗಿಲ್ಲ ಎಂದು ತಿಳಿಸಿದ್ದರು.
ಅಲ್ಲದೇ ಸದನದ ಹೊರಗೆ ಸುದ್ದಿಗಾರರೊಂದಿಗೂ ಮಾತನಾಡಿದ್ದ ಕೆ.ಜೆ.ಜಾರ್ಜ್, ಒಬ್ಬ ಸಚಿರ ರಾಜೀನಾಮೆ ಅಷ್ಟು ಸುಲಭವೇ? ನಾನೇಕೆ ರಾಜೀನಾಮೆ ಕೊಡಲಿ? ಇಂತಹ ಪ್ರಶ್ನೆಯೇ ಉದ್ಭವಿಸಿಲ್ಲ. ನನ್ನ ಇಲಾಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ಯತೀಂದ್ರ ಸಿದ್ದರಾಮಯ್ಯ ಒಳ್ಳೆಯವರು. ನಾನು ಯಾವ ರಾಜೀನಾಮೆಗೂ ನಿರ್ಧರಿಸಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಾತನಾಡಿದ್ದು, ಸಚಿವರ ರಾಜೀನಾಮೆ ಪ್ರಹಸನದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಕೊಟ್ಟಿಲ್ಲ. ಈ ಬಗ್ಗೆ ಯಾವುದೇ ಗೊಂದಲಗಳೂ ಬೇಡ. ಅವರು ಸಚಿವರಾಗಿಯೇ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಚಿವರ ರಾಜೀನಾಮೆ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.

