ದೆಹಲಿಯ ಜೆಎನ್‌ಯು ಕ್ಯಾಂಪಸ್ ಮತ್ತೆ ಸುದ್ದಿಯಲ್ಲಿದೆ. ವಿವಾದಾತ್ಮಕ ಘೋಷಣೆಗಳ ನಂತರದ ರಾಜಕೀಯ ಸಂಘರ್ಷ ಇನ್ನೂ ಮುಂದುವರೆದಿದೆ. ಸೋಮವಾರ ಕ್ಯಾಂಪಸ್‌ನಲ್ಲಿ ಮತ್ತೆ ಘೋಷಣೆಗಳು ಕೇಳಿ ಬಂದಿದ್ದು, ಸಂಘರ್ಷ ಮುಂದುವರೆಯುವ ಸೂಚನೆ ಸಿಕ್ಕಿದೆ.
2020ರ ದೆಹಲಿ ದಂಗೆಯ ಪಿತೂರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಘೋಷಣೆಗಳನ್ನು ಕೂಗಲಾಗಿದೆ.
ವಿದ್ಯಾರ್ಥಿಗಳ ಗುಂಪೊಂದು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿವಾದಾತ್ಮಕ ಘೋಷಣೆಗಳನ್ನು ಕೂಗಿದೆ ಎಂಬ ಮಾಹಿತಿ ಇದೆ.
ಸೋಮವಾರ ರಾತ್ರಿ ನಡೆದ ಈ ಪ್ರತಿಭಟನೆಯ ವಿಡಿಯೋದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರನ್ನು ಖಂಡಿಸಿ ಘೋಷಣೆಗಳನ್ನು ಕೂಗಿರುವುದು ಕಂಡುಬಂದಿದೆ. ಕ್ಯಾಂಪಸ್‌ನಲ್ಲಿ ನಡೆದ ಈ ಘೋಷಣೆಗಳ ಕುರಿತು ಕಾಂಗ್ರೆಸ್ ನಾಯಕ ಉದಿತ್ ರಾಜ್ ಪ್ರತಿಕ್ರಿಯಿಸಿ, “ಇದು ಅಸಮಾಧಾನ ವ್ಯಕ್ತಪಡಿಸುವ ಒಂದು ರೀತಿ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ JNU ನಲ್ಲಿ ಆಕ್ರೋಶವಿದೆ. ಅವರು (ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್) ಮುಸ್ಲಿಮರಾದ ಕಾರಣ ಅವರೊಂದಿಗೆ ಈ ರೀತಿ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಮಾತನಾಡಿ, “ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ದೇಶದಲ್ಲಿ ಯಾವುದೇ ರೀತಿಯ ಅರಾಜಕತೆಯನ್ನು ಸಹಿಸುವುದಿಲ್ಲ. ನ್ಯಾಯಾಲಯದ ತೀರ್ಪುಗಳು ಎಲ್ಲರಿಗೂ ಅನ್ವಯಿಸುತ್ತವೆ ಮತ್ತು ಇಂತಹ ಚಟುವಟಿಕೆಗಳು ಸ್ವೀಕಾರಾರ್ಹವಲ್ಲ” ಎಂದು ತಿಳಿಸಿದ್ದಾರೆ.
ಇದು ಕೇವಲ ಜೆಎನ್‌ಯು ವಿಚಾರವಲ್ಲ: ದೆಹಲಿ ಸಚಿವ ಕಪಿಲ್ ಮಿಶ್ರಾ ಪ್ರತಿಕ್ರಿಯಿಸಿ, “ಇದು ಕೇವಲ ಜೆಎನ್‌ಯು ವಿಷಯವಲ್ಲ, ಕೆಲವು ಜನರು ಇಂತಹ ದೇಶವಿರೋಧಿ ಮತ್ತು ಧರ್ಮವಿರೋಧಿ ಘೋಷಣೆಗಳನ್ನು ಕೂಗುತ್ತಲೇ ಇರುತ್ತಾರೆ. ಇವರು ಅಫ್ಜಲ್ ಗುರು ಪರವಾಗಿ, ಭಯೋತ್ಪಾದಕರು ಮತ್ತು ನಕ್ಸಲರ ಬೆಂಬಲಕ್ಕೆ ನಿಲ್ಲುತ್ತಾರೆ. ಆದರೆ ಇಂದು ನಕ್ಸಲರು ಮತ್ತು ಭಯೋತ್ಪಾದಕರು ನಾಶವಾಗುತ್ತಿದ್ದಾರೆ. ದೆಹಲಿಯ ವಿರುದ್ಧ ಪಿತೂರಿ ಮಾಡಿದವರ ವಿರುದ್ಧ ನ್ಯಾಯಾಲಯದ ತೀರ್ಪು ಬಂದಿದೆ, ಇದು ಕೇವಲ ಅವರ ಹತಾಶೆಯಾಗಿದೆ” ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಪೋಸ್ಟ್ ಹಾಕಿರುವ ಅವರು, “ಹಾವುಗಳ ಹೆಡೆಗಳನ್ನು ತುಳಿಯಲಾಗುತ್ತಿದೆ, ಹಾಗಾಗಿ ಮರಿ ಹಾವುಗಳು ಚೀರಾಡುತ್ತಿವೆ” ಎಂದು ಲೇವಡಿ ಮಾಡಿದ್ದಾರೆ.
ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡಿ, “ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವೂ ಪ್ರತಿಭಟನೆ ನಡೆದರೆ ದೇಶದಲ್ಲಿ ಉಳಿಯುವುದಾದರೂ ಏನು?. ಈ ಜನರಿಗೆ ಸಂವಿಧಾನ ಅಥವಾ ಕಾನೂನಿನ ಮೇಲೆ ಗೌರವವಿಲ್ಲ. ಇವರು ದೇಶವನ್ನು ಒಡೆಯುವ ಪ್ರತ್ಯೇಕತಾವಾದಿಗಳು. ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ಬಳಸಿದ ಭಾಷೆ ನಾಚಿಕೆಗೇಡಿನ ಸಂಗತಿ. ಎಎಪಿ ಮತ್ತು ಕಾಂಗ್ರೆಸ್ ಯಾವಾಗಲೂ ಇಂತಹ ಪಿತೂರಿಗಳ ಹಿಂದೆ ನಿಂತಿರುತ್ತವೆ” ಎಂದು ಆರೋಪಿಸಿದರು.

