ಸರ್ಕಾರಿ ಅಥವಾ ಸಾರ್ವಜನಿಕ ವಲಯದ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವರ ವಿವಾಹಿತ ಮಗಳಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯುವ ಹಕ್ಕಿದೆ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಗಳು ಮದುವೆಯಾಗಿದ್ದಾಳೆ ಎಂಬ ಏಕೈಕ ಕಾರಣಕ್ಕಾಗಿ ಆಕೆಯ ಅವಲಂಬಿತ ಹಕ್ಕನ್ನು ಕಸಿದುಕೊಳ್ಳಲಾಗದು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಮೃತ ಉದ್ಯೋಗಿಯ ವಿವಾಹಿತ ಮಗಳಿಗೆ 8 ವಾರಗಳ ಒಳಗೆ ಅನುಕಂಪದ ನೌಕರಿ ನೀಡುವಂತೆ ಕೋಲ್ ಮೈನ್ಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಗೆ (CMPFO) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ದೀಪಕ್ ರೋಷನ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಧನ್‌ಬಾದ್‌ನ ಕಲ್ಲಿದ್ದಲು ಗಣಿ ಸಂಸ್ಥೆಯಲ್ಲಿ ಸಹಾಯಕರಾಗಿದ್ದ ಅರ್ಜುನ್ ಪ್ರಸಾದ್ ಎಂಬುವರು 2013ರ ನವೆಂಬರ್‌ನಲ್ಲಿ ಸೇವೆಯಲ್ಲಿರುವಾಗಲೇ ನಿಧನರಾಗಿದ್ದರು. ಇಬ್ಬರು ಗಂಡು ಮಕ್ಕಳಿದ್ದರೂ ಅವರು ವೃದ್ಧ ತಾಯಿಯನ್ನು ನೋಡಿಕೊಳ್ಳದೆ ಪ್ರತ್ಯೇಕವಾಗಿ ನೆಲೆಸಿದ್ದರು. ಅನಾರೋಗ್ಯ ಪೀಡಿತ ಪತಿಗೆ ತನ್ನ ಕಿಡ್ನಿ ದಾನ ಮಾಡಿದ್ದ ಆ ವೃದ್ಧ ತಾಯಿಯನ್ನು ವಿವಾಹಿತ ಮಗಳೇ ತನ್ನ ಮನೆಯಲ್ಲಿ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದರು. ಮಗಳ ಗಂಡನಿಗೆ ಅತ್ಯಲ್ಪ ಆದಾಯವಿದ್ದ ಕಾರಣ, ತಾಯಿ ಮತ್ತು ಮಗಳು ಮೃತ ನೌಕರನ ಪಿಂಚಣಿ ಹಣದಲ್ಲೇ ಬದುಕು ಸಾಗಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ವೃದ್ಧ ತಾಯಿಯು ತನ್ನ ಮಗಳಿಗೆ ಅನುಕಂಪದ ನೌಕರಿ ನೀಡುವಂತೆ ಸಂಸ್ಥೆಗೆ ಮನವಿ ಮಾಡಿದ್ದರು. ಆದರೆ, ‘ಮಗಳಿಗೆ ಮದುವೆಯಾಗಿದೆ, ಆಕೆಯ ಪತಿಗೆ ಆದಾಯವಿದೆ ಮತ್ತು ಆಕೆಗೆ ಇಬ್ಬರು ಸಹೋದರರಿದ್ದಾರೆ’ ಎಂಬ ಕಾರಣ ನೀಡಿ ಸಂಸ್ಥೆಯು 2017 ಹಾಗೂ 2024ರಲ್ಲಿ ಉದ್ಯೋಗ ನೀಡುವ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, “ಮಗಳ ಪತಿಗೆ ಅಲ್ಪ ಪ್ರಮಾಣದ ಆದಾಯವಿದೆ ಎಂದ ಮಾತ್ರಕ್ಕೆ ಆಕೆ ತನ್ನ ತಂದೆಯ ಮೇಲೆ ಅವಲಂಬಿತವಾಗಿರಲಿಲ್ಲ ಎಂದು ಅರ್ಥವಲ್ಲ. ಮದುವೆಯಾಗಿದೆ ಎಂಬ ಕಾರಣಕ್ಕೆ ಅವಲಂಬಿತ ಹಕ್ಕನ್ನು ನಿರಾಕರಿಸಲಾಗದು. ವೃದ್ಧ ತಾಯಿಯ ಪೋಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಮತ್ತು ಸ್ವಂತ ಆದಾಯವಿಲ್ಲದ ಮಗಳು ಈ ಹುದ್ದೆಗೆ ಸಂಪೂರ್ಣ ಅರ್ಹಳಾಗಿದ್ದಾಳೆ” ಎಂದು ಅಭಿಪ್ರಾಯಪಟ್ಟಿತು. ಸಂಸ್ಥೆಯ ನಿರಾಕರಣೆ ಆದೇಶವನ್ನು ರದ್ದುಪಡಿಸಿದ ನ್ಯಾಯಾಲಯ, ಮುಂದಿನ ಎಂಟು ವಾರಗಳ ಒಳಗೆ ನಿಯಮಾನುಸಾರ ಆಕೆಗೆ ನೇಮಕಾತಿ ಆದೇಶ ನೀಡುವಂತೆ ಸೂಚಿಸಿದೆ.

