ಬೆಂಗಳೂರು: ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ಆಭರಣಗಳು ಕಳ್ಳತನವಾದರೆ ಅಥವಾ ನೈಸರ್ಗಿಕ ವಿಕೋಪದಲ್ಲಿ ಹಾನಿಯಾದರೆ ಉಂಟಾಗುವ ಆರ್ಥಿಕ ನಷ್ಟ ಅಷ್ಟಿಷ್ಟಲ್ಲ. ಇಂತಹ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಆಸರೆಯಾಗುವುದು ಆಭರಣ ವಿಮೆ (Jewellery Insurance). ಈ ವಿಮೆಯ ಮೂಲಕ ನಿಮ್ಮ ಬೆಲೆಬಾಳುವ ಆಭರಣಗಳ ನಷ್ಟವನ್ನು ಹೇಗೆ ಮರುಪಡೆಯಬಹುದು ಎಂಬ ವಿವರ ಇಲ್ಲಿದೆ.
ಆಭರಣ ವಿಮೆ ಎಂದರೇನು?
ಇದು ನಿಮ್ಮ ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಬೆಲೆಬಾಳುವ ರತ್ನದ ಕಲ್ಲುಗಳಿಗೆ ರಕ್ಷಣೆ ನೀಡುವ ಪಾಲಿಸಿಯಾಗಿದೆ. ಮುತ್ತೂಟ್ ಫೈನಾನ್ಸ್, ಬಜಾಜ್ ಅಲಿಯಾನ್ಸ್, ರಿಲಯನ್ಸ್ ಹೋಂ ಇನ್ಶುರೆನ್ಸ್ ಮತ್ತು ಹೆಚ್ಡಿಎಫ್ಸಿ ಎರ್ಗೊದಂತಹ ಪ್ರಮುಖ ಕಂಪನಿಗಳು ಈ ವಿಮೆಯನ್ನು ನೀಡುತ್ತವೆ.
ಯಾವೆಲ್ಲಾ ಅಪಾಯಗಳಿಗೆ ವಿಮೆ ಅನ್ವಯಿಸುತ್ತದೆ?
ಕಳ್ಳತನ: ಮನೆಯಲ್ಲಿ ಅಥವಾ ಸಮಾರಂಭಗಳಲ್ಲಿ ಆಭರಣ ಕಳ್ಳತನವಾದರೆ.
ನೈಸರ್ಗಿಕ ವಿಪತ್ತು: ಪ್ರವಾಹ, ಭೂಕಂಪ ಅಥವಾ ಅಗ್ನಿ ಅವಘಡದಿಂದ ಹಾನಿಯಾದಾಗ.
ಬೆಳ್ಳಿ ಮತ್ತು ರತ್ನಗಳು: ಕೇವಲ ಚಿನ್ನ ಮಾತ್ರವಲ್ಲದೆ ಬೆಳ್ಳಿ ಮತ್ತು ಅಮೂಲ್ಯ ಹರಳುಗಳಿಗೂ ಇದು ಅನ್ವಯಿಸುತ್ತದೆ.
ಗಮನಿಸಿ: ಇವುಗಳಿಗೆ ವಿಮೆ ಸಿಗುವುದಿಲ್ಲ
ಆಭರಣಗಳನ್ನು ಕ್ಲೀನ್ ಮಾಡುವಾಗ ಅಥವಾ ರಿಪೇರಿ ಮಾಡುವಾಗ ಉಂಟಾಗುವ ಹಾನಿ.
ಉದ್ದೇಶಪೂರ್ವಕ ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಕಳೆದುಕೊಂಡರೆ.
ಹಳೆಯ ಆಭರಣ ನೀಡಿ ಹೊಸದು ಖರೀದಿಸಿದರೆ ವಿಮೆ ಆಟೋಮ್ಯಾಟಿಕ್ ಆಗಿ ವರ್ಗಾವಣೆಯಾಗುವುದಿಲ್ಲ.
ಕಾನೂನುಬಾಹಿರ ಕಾರಣಕ್ಕೆ ಸರ್ಕಾರ ಆಭರಣ ಮುಟ್ಟುಗೋಲು ಹಾಕಿಕೊಂಡರೆ ವಿಮೆ ಸಿಗದು.
ಪ್ರೀಮಿಯಂ ಮತ್ತು ದಾಖಲೆಗಳು:
ಸಾಮಾನ್ಯವಾಗಿ ಆಭರಣದ ಒಟ್ಟು ಮೌಲ್ಯದ ಸುಮಾರು ಶೇ. 1 (1%) ರಷ್ಟು ವಾರ್ಷಿಕ ಪ್ರೀಮಿಯಂ ಇರುತ್ತದೆ.
ಅಗತ್ಯ ದಾಖಲೆಗಳು:
ಅಧಿಕೃತ ಆಭರಣ ವ್ಯಾಪಾರಿಯಿಂದ ಪಡೆದ ಮೌಲ್ಯಮಾಪನ ಪ್ರಮಾಣಪತ್ರ (Valuation Certificate).
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ನಂತಹ ಕೆವೈಸಿ (KYC) ದಾಖಲೆಗಳು.
ಆಭರಣ ಖರೀದಿಸಿದ ಬಿಲ್ ಅಥವಾ ಇನ್ವಾಯ್ಸ್.
ಕ್ಲೈಮ್ ಮಾಡುವುದು ಹೇಗೆ?
ಆಭರಣ ಕಳೆದುಹೋದ ತಕ್ಷಣ ವಿಮಾ ಕಂಪನಿಗೆ ಇಮೇಲ್ ಅಥವಾ ಕರೆ ಮೂಲಕ ತಿಳಿಸಬೇಕು. ಕಳ್ಳತನವಾಗಿದ್ದರೆ ಎಫ್ಐಆರ್ (FIR) ಪ್ರತಿ ಕಡ್ಡಾಯ. ಹಾನಿಯಾದ ಚಿತ್ರಗಳು ಅಥವಾ ವಿಡಿಯೋಗಳನ್ನು ಸಾಕ್ಷಿಯಾಗಿ ಇಟ್ಟುಕೊಳ್ಳುವುದು ಉತ್ತಮ. ವಿಮಾ ಕಂಪನಿಯು ಸರ್ವೇಯರ್ ಮೂಲಕ ತನಿಖೆ ನಡೆಸಿ ಬಳಿಕ ಮರುಪಾವತಿ ಮಾಡುತ್ತದೆ.

