HomeIndiaಧೂಮಪಾನ, ಟಿಕೆಟ್‌ಲೆಸ್ ಪ್ರಯಾಣಕ್ಕೆ ಬೀಳುತ್ತೆ ಭಾರಿ ಬರೆ ; ʼಜನ್ ವಿಶ್ವಾಸ್ʼ ಕಾಯ್ದೆಯಡಿ ರೈಲ್ವೆ ನಿಯಮಗಳು...

ಧೂಮಪಾನ, ಟಿಕೆಟ್‌ಲೆಸ್ ಪ್ರಯಾಣಕ್ಕೆ ಬೀಳುತ್ತೆ ಭಾರಿ ಬರೆ ; ʼಜನ್ ವಿಶ್ವಾಸ್ʼ ಕಾಯ್ದೆಯಡಿ ರೈಲ್ವೆ ನಿಯಮಗಳು ಮತ್ತಷ್ಟು ಕಠಿಣ !

ಭಾರತೀಯ ರೈಲ್ವೆ ಪ್ರಯಾಣವನ್ನು ಹೆಚ್ಚು ಸುರಕ್ಷಿತ, ಶಿಸ್ತುಬದ್ಧ ಹಾಗೂ ವ್ಯವಸ್ಥಿತವಾಗಿಸುವ ನಿಟ್ಟಿನಲ್ಲಿ ಸಂಸತ್ತು ಅಂಗೀಕರಿಸಿರುವ ‘ಜನ್ ವಿಶ್ವಾಸ್ (ತಿದ್ದುಪಡಿ) ಕಾಯ್ದೆ’ಯ ಅನ್ವಯ ರೈಲ್ವೆ ಕಾಯ್ದೆ 1989ಕ್ಕೆ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಸಣ್ಣಪುಟ್ಟ ನಿಯಮ ಉಲ್ಲಂಘನೆಗಳ ಮೇಲಿನ ದಂಡದ ಮೊತ್ತವನ್ನು ಬರೋಬ್ಬರಿ 5 ರಿಂದ 20 ಪಟ್ಟು ಹೆಚ್ಚಿಸಲಾಗಿದ್ದು, ಉತ್ತರ ರೈಲ್ವೆಯ ದೆಹಲಿ ವಿಭಾಗ ಸೇರಿದಂತೆ ದೇಶಾದ್ಯಂತ ಕಟ್ಟುನಿಟ್ಟಿನ ಜಾರಿಗೆ ತರಲಾಗಿದೆ.

ಸಣ್ಣಪುಟ್ಟ ತಪ್ಪುಗಳನ್ನು ಕ್ರಿಮಿನಲ್ ಅಪರಾಧಗಳ ಬದಲಿಗೆ ಆಡಳಿತಾತ್ಮಕ ಉಲ್ಲಂಘನೆಗಳೆಂದು ಪರಿಗಣಿಸಿ, ಕೋರ್ಟ್ ಅಲೆದಾಟವಿಲ್ಲದೆ ಸ್ಥಳದಲ್ಲೇ ಭಾರಿ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿದೆ.

ಮಹಿಳಾ ಬೋಗಿ ಪ್ರವೇಶಕ್ಕೆ ₹2,500 ದಂಡ !

ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಮಹಿಳೆಯರ ಮೀಸಲು ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಪುರುಷರಿಗೆ ಗರಿಷ್ಠ ₹500 ದಂಡ ವಿಧಿಸಲಾಗುತ್ತಿತ್ತು. ಆದರೆ, ಈಗ ಈ ದಂಡದ ಮೊತ್ತವನ್ನು ನೇರವಾಗಿ ₹2,500ಕ್ಕೆ ಏರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಿಯಮ ಜಾರಿಯಾದ ಬಳಿಕ ಜುಲೈ ತಿಂಗಳೊಂದರಲ್ಲೇ ದೆಹಲಿ ವಿಭಾಗದ ಆರ್‌ಪಿಎಫ್ (ರೈಲ್ವೆ ಭದ್ರತಾ ಪಡೆ) ಮಹಿಳಾ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ 302 ಪುರುಷ ಪ್ರಯಾಣಿಕರನ್ನು ವಶಕ್ಕೆ ಪಡೆದು ಬರೋಬ್ಬರಿ ₹7.5 ಲಕ್ಷ ದಂಡ ವಸೂಲಿ ಮಾಡಿದೆ. ಈ ಹಿಂದೆ ಹಳೆಯ ದರಗಳಿದ್ದಾಗ ತಿಂಗಳಿಗೆ ಕೇವಲ ₹33,000 ವಸೂಲಾಗುತ್ತಿತ್ತು.

ಹೊಸ ದಂಡ ದರಗಳ ಸಂಪೂರ್ಣ ಪಟ್ಟಿ:

  • ಟಿಕೆಟ್‌ ರಹಿತ ಪ್ರಯಾಣ: ಮಾನ್ಯ ಟಿಕೆಟ್ ಅಥವಾ ಪಾಸ್ ಇಲ್ಲದೆ ಪ್ರಯಾಣಿಸಿದರೆ ಕನಿಷ್ಠ ದಂಡ ₹250 ರಿಂದ ₹500ಕ್ಕೆ ಹೆಚ್ಚಳ.

  • ಧೂಮಪಾನ: ರೈಲು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಬೀಡಿ, ಸಿಗರೇಟ್ ಸೇದಿದರೆ ಈ ಹಿಂದೆ ಇದ್ದ ₹100 ದಂಡವನ್ನು ಬರೋಬ್ಬರಿ ₹2,000ಕ್ಕೆ ಏರಿಸಲಾಗಿದೆ.

  • ಮಹಿಳಾ ಬೋಗಿ ಪ್ರವೇಶ: ಪುರುಷ ಪ್ರಯಾಣಿಕರು ಲೇಡೀಸ್ ಕೋಚ್ ಪ್ರವೇಶಿಸಿದರೆ ₹2,500 ದಂಡ.

  • ಅಕ್ರಮ ವ್ಯಾಪಾರ ಮತ್ತು ಭಿಕ್ಷಾಟನೆ: ಅನುಮತಿಯಿಲ್ಲದೆ ರೈಲು ಅಥವಾ ನಿಲ್ದಾಣಗಳಲ್ಲಿ ವ್ಯಾಪಾರ ಮಾಡಿದರೆ ಅಥವಾ ಭಿಕ್ಷೆ ಬೇಡಿದರೆ ಮೊದಲ ಬಾರಿಗೆ ₹2,000 ದಂಡ.

  • ಬರ್ತ್ ಆಕ್ರಮಣ: ಇನ್ನೊಬ್ಬ ಪ್ರಯಾಣಿಕರ ಕನ್ಫರ್ಮ್ ಆದ ಸೀಟು ಅಥವಾ ಬರ್ತ್ ಅನ್ನು ಬಲವಂತವಾಗಿ ಅತಿಕ್ರಮಿಸಿಕೊಂಡರೆ ₹1,000 ದಂಡ.

  • ಮದ್ಯಪಾನ ಹಾಗೂ ರಂಪಾಟ: ಕುಡಿದು ಪ್ರಯಾಣಿಕರಿಗೆ ತೊಂದರೆ ನೀಡಿದರೆ ರೈಲಿನಿಂದ ಹೊರಹಾಕುವುದು, 24 ಗಂಟೆಗಳ ಕಾಲ ಜೈಲು ಅಥವಾ ₹1,000 ದಂಡ.

  • ಅಪಾಯಕಾರಿ ವಸ್ತುಗಳ ಸಾಗಣೆ: ಅನುಮತಿಯಿಲ್ಲದೆ ಸ್ಫೋಟಕ ಅಥವಾ ಅಪಾಯಕಾರಿ ವಸ್ತುಗಳನ್ನು ಸಾಗಿಸಿದರೆ ಗರಿಷ್ಠ ₹10,000 ವರೆಗೆ ದಂಡ.

ದಂಡದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ !

ಹಿರಿಯ ಆರ್‌ಪಿಎಫ್ ವಿಭಾಗೀಯ ಭದ್ರತಾ ಆಯುಕ್ತ ಅಶುತೋಷ್ ಪಾಂಡೆ ಈ ಕುರಿತು ಮಾಹಿತಿ ನೀಡಿ, “ಹಿಂದೆ ಪ್ರಯಾಣಿಕರು ತಮ್ಮ ಆರ್ಥಿಕ ಪರಿಸ್ಥಿತಿ ಅಥವಾ ಬಡತನದ ಕಾರಣ ನೀಡಿದರೆ ಮ್ಯಾಜಿಸ್ಟ್ರೇಟ್‌ಗಳು ಅಥವಾ ಅಧಿಕಾರಿಗಳು ದಂಡದ ಮೊತ್ತವನ್ನು ಕಡಿಮೆ ಮಾಡುವ ಅವಕಾಶವಿತ್ತು. ಆದರೆ ಜನ್ ವಿಶ್ವಾಸ್ ಕಾಯ್ದೆಯಡಿ ₹500 ರಿಂದ ₹2,500 ವರೆಗೆ ನಿರ್ದಿಷ್ಟ ದಂಡ ನಿಗದಿಪಡಿಸಲಾಗಿದೆ. ಇದರಲ್ಲಿ ಯಾವುದೇ ರಿಯಾಯಿತಿ, ಮನ್ನಾ ಅಥವಾ ಕಡಿತಕ್ಕೆ ಅವಕಾಶವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಜನ್ ವಿಶ್ವಾಸ್ ಕಾಯ್ದೆಯ 3 ಪ್ರಮುಖ ವೈಶಿಷ್ಟ್ಯಗಳು:

ಸ್ಥಳದಲ್ಲೇ ಇತ್ಯರ್ಥ: ನಿಯಮ ಉಲ್ಲಂಘನೆಗಳಿಗೆ ಟಿಟಿಇ ಅಥವಾ ಆರ್‌ಪಿಎಫ್ ಸಿಬ್ಬಂದಿ ಸ್ಥಳದಲ್ಲೇ ದಂಡ ವಸೂಲಿ ಮಾಡಿ ಪ್ರಕರಣ ಇತ್ಯರ್ಥಪಡಿಸುತ್ತಾರೆ. ಪ್ರಯಾಣಿಕರು ದಂಡ ಕಟ್ಟಲು ಸಂಪೂರ್ಣ ನಿರಾಕರಿಸಿದರೆ ಮಾತ್ರ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ.

ಸ್ಪಷ್ಟ ಕಾನೂನು ಪ್ರಕ್ರಿಯೆ: ಆಡಳಿತಾತ್ಮಕವಾಗಿ ಸ್ಥಳದಲ್ಲೇ ಸಂಗ್ರಹಿಸುವ ದಂಡ ಮತ್ತು ನ್ಯಾಯಾಲಯ ವಿಧಿಸುವ ದಂಡದ ನಡುವೆ ಸ್ಪಷ್ಟ ಕಾನೂನು ವ್ಯತ್ಯಾಸವನ್ನು ಕಲ್ಪಿಸಲಾಗಿದೆ.

ಪ್ರತಿ 3 ವರ್ಷಕ್ಕೊಮ್ಮೆ ದಂಡ ಹೆಚ್ಚಳ: ಹಣದುಬ್ಬರ ಹಾಗೂ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ, ಕಾಯ್ದೆಯಲ್ಲಿರುವ ಎಲ್ಲಾ ದಂಡದ ಮೊತ್ತಗಳು ಸ್ವಯಂಚಾಲಿತವಾಗಿ ಪ್ರತಿ 3 ವರ್ಷಗಳಿಗೊಮ್ಮೆ ಶೇಕಡಾ 10ರಷ್ಟು ಹೆಚ್ಚಳವಾಗುವ ವಿಶೇಷ ನಿಯಮವನ್ನು ಅಳವಡಿಸಲಾಗಿದೆ.

ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಾರ್ವಜನಿಕರು ರೈಲ್ವೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಇಲಾಖೆ ಮನವಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular