ಇಟಲಿ ತಂಡದ ನಾಯಕ ಹ್ಯಾರಿ ಮ್ಯಾನೆಂಟಿ ಹೇಳುವಂತೆ, ಅವರ ತಂಡದ 15 ಆಟಗಾರರಲ್ಲಿ 12 ಮಂದಿ ಕ್ರಿಕೆಟ್ ಹೊರತಾಗಿ ಜೀವನೋಪಾಯಕ್ಕಾಗಿ ಬೇರೆ ಕೆಲಸಗಳನ್ನು ಮಾಡುತ್ತಾರೆ. ಅದರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಶನ್ ಕಲುಗಮಗೆ ಒಬ್ಬರು. ಇವರು ಇಟಲಿಯ ಲೂಕಾದಲ್ಲಿ ಪಿಜ್ಜಾ ತಯಾರಕನಾಗಿ (Pizzaiolo) ಕೆಲಸ ಮಾಡುತ್ತಲೇ ವಿಶ್ವಕಪ್ ಕನಸು ಕಂಡವರು.
ದೋಸೆ ಹಿಟ್ಟಿನಂತೆ ಚೆಂಡನ್ನು ತಿರುಗಿಸಿದ ಕ್ರಿಶನ್! ನೇಪಾಳ ತಂಡವು ಕೆಲವು ದಿನಗಳ ಹಿಂದೆಯಷ್ಟೇ ಬಲಿಷ್ಠ ಇಂಗ್ಲೆಂಡ್‌ಗೆ ಬೆವರಿಳಿಸಿತ್ತು. ಅಂತಹ ತಂಡವನ್ನು ಇಟಲಿ ಕೇವಲ 123 ರನ್‌ಗಳಿಗೆ ಕಟ್ಟಿಹಾಕಿತು. ಇದಕ್ಕೆ ಕಾರಣ ಕ್ರಿಶನ್ ಕಲುಗಮಗೆ ಅವರ ಘಾತಕ ಬೌಲಿಂಗ್. ಅವರು ಕೇವಲ 18 ರನ್ ನೀಡಿ 3 ಪ್ರಮುಖ ವಿಕೆಟ್ ಕಲೆಹಾಕಿದರು. “ಅವರು ಪಿಜ್ಜಾ ತಯಾರಿಸುವಾಗ ಹಿಟ್ಟನ್ನು ಹೇಗೆ ಮೇಲಕ್ಕೆ ಚಿಮ್ಮಿಸಿ ತಿರುಗಿಸುತ್ತಾರೋ, ಅದೇ ರೀತಿ ಚೆಂಡನ್ನೂ ತಿರುಗಿಸುತ್ತಾರೆ” ಎಂದು ಕೋಚ್ ಜಾನ್ ಡೇವಿಸನ್ ತಮಾಷೆಯಾಗಿ ಹೊಗಳಿದ್ದಾರೆ.
ಶ್ರೀಲಂಕಾದಿಂದ ಇಟಲಿಗೆ ಪ್ರಯಾಣ ಕ್ರಿಶನ್ ಅವರ ಕ್ರಿಕೆಟ್ ಪ್ರೇಮ ಹುಟ್ಟಿದ್ದು ಶ್ರೀಲಂಕಾದ ನೆಗೊಂಬೊದಲ್ಲಿ. 2007ರಲ್ಲಿ ಅವರ ಪೋಷಕರು ಇಟಲಿಗೆ ವಲಸೆ ಹೋದಾಗ, 16 ವರ್ಷದ ಕ್ರಿಶನ್‌ಗೆ ತಮ್ಮ ಕ್ರಿಕೆಟ್ ಬದುಕು ಮುಗಿಯಿತು ಎಂದೇ ಅನ್ನಿಸಿತ್ತು. ಇಟಲಿಯಲ್ಲಿ ಬ್ಯಾಟ್ ಹಿಡಿಯುವ ಬದಲು ಹಿಟ್ಟಿನ ಚೀಲಗಳನ್ನು ಹೊರುವ ಮತ್ತು ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆ ಎದುರಾಯಿತು. ಕ್ರಿಕೆಟ್ ಪಂದ್ಯಗಳಿಗಾಗಿ ಭಾನುವಾರ ರಜೆ ಕೇಳಿದಾಗ ಅನೇಕ ಕೆಲಸಗಳಿಂದ ಅವರನ್ನು ತೆಗೆದುಹಾಕಲಾಗಿತ್ತು. ಆದರೂ ಛಲ ಬಿಡದ ಅವರು ಪಾರ್ಕಿಂಗ್ ಲಾಟ್‌ಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ತಮ್ಮ ಕೌಶಲ್ಯವನ್ನು ಜೀವಂತವಾಗಿರಿಸಿಕೊಂಡಿದ್ದರು.
ವೇಗಿಯಾಗಿದ್ದವರು ಸ್ಪಿನ್ನರ್ ಆದ ಕಥೆ ಆರಂಭದಲ್ಲಿ ವೇಗದ ಬೌಲರ್ ಆಗಿದ್ದ ಕ್ರಿಶನ್, 2021ರಲ್ಲಿ ಗಾಯದ ಸಮಸ್ಯೆಯಿಂದಾಗಿ ಲೆಗ್ ಸ್ಪಿನ್ನರ್ ಆಗಿ ಬದಲಾದರು. ಅವರ ಗೂಗ್ಲಿಗಳನ್ನು ಓದುವುದು ಬ್ಯಾಟರ್‌ಗಳಿಗೆ ಕಷ್ಟವಾಯಿತು. ನೇಪಾಳ ವಿರುದ್ಧದ ಪಂದ್ಯದಲ್ಲಿ ಇದೇ ಅಸ್ತ್ರವು ಇಟಲಿಗೆ ಚೊಚ್ಚಲ ವಿಶ್ವಕಪ್ ಗೆಲುವು ತಂದುಕೊಟ್ಟಿತು. 124 ರನ್‌ಗಳ ಗುರಿಯನ್ನು ಇಟಲಿಯ ಮೊಸ್ಕಾ ಸಹೋದರರು (ಜಸ್ಟಿನ್ ಮತ್ತು ಆಂಥೋನಿ) ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿ 10 ವಿಕೆಟ್‌ಗಳ ಭರ್ಜರಿ ಜಯ ತಂದಿತ್ತರು.
ಇಟಲಿ ಕ್ರಿಕೆಟ್‌ನ ಭವಿಷ್ಯ ಸದ್ಯ ವಿಶ್ವ ಶ್ರೇಯಾಂಕದಲ್ಲಿ 27ನೇ ಸ್ಥಾನದಲ್ಲಿರುವ ಇಟಲಿ ತಂಡದಲ್ಲಿ ಅಕೌಂಟೆಂಟ್‌ಗಳು, ಕಾರ್ಮಿಕರು ಮತ್ತು ಹೋಟೆಲ್ ಸಿಬ್ಬಂದಿಗಳೇ ಆಟಗಾರರಾಗಿದ್ದಾರೆ. “ಮುಂದೊಂದು ದಿನ ನಮ್ಮ ಆಟಗಾರರು ಏಪ್ರನ್ ಕಳಚಿಟ್ಟು ಪೂರ್ಣಾವಧಿ ಕ್ರಿಕೆಟಿಗರಾಗುವ ಕಾಲ ಬರಲಿದೆ” ಎಂಬ ನಂಬಿಕೆ ನಾಯಕ ಮ್ಯಾನೆಂಟಿ ಅವರದ್ದು. ಈ ಗೆಲುವಿನ ಮೂಲಕ ಇಟಲಿಯಲ್ಲಿ ಕ್ರಿಕೆಟ್ ಬೆಳವಣಿಗೆಗೆ ಹೊಸ ಹಾದಿ ತೆರೆದಂತಾಗಿದೆ.

