HomeJobsಮದುವೆಯಾದ 15 ದಿನಕ್ಕೆ ಐಟಿ ದಂಪತಿಗೆ ಲೇ ಆಫ್ ಶಾಕ್: ಇಬ್ಬರು ಮ್ಯಾನೇಜರ್‌ಗಳ ನಡೆ ಬದಲಿಸಿತು...

ಮದುವೆಯಾದ 15 ದಿನಕ್ಕೆ ಐಟಿ ದಂಪತಿಗೆ ಲೇ ಆಫ್ ಶಾಕ್: ಇಬ್ಬರು ಮ್ಯಾನೇಜರ್‌ಗಳ ನಡೆ ಬದಲಿಸಿತು ಬದುಕಿನ ಹಾದಿ!

ಅಮೆರಿಕದ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ದಂಪತಿಯ ಕಥೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ಈ ದಂಪತಿಗೆ ಕೆಲಸ ಹೋದ ನೋವಿಗಿಂತಲೂ ಹೆಚ್ಚಾಗಿ, ಆ ಸುದ್ದಿಯನ್ನು ತಿಳಿಸಿದ ಇಬ್ಬರು ಮ್ಯಾನೇಜರ್‌ಗಳ ಭಿನ್ನ ವರ್ತನೆ ಈಗ ಚರ್ಚೆಯ ಮುನ್ನೆಲೆಗೆ ಬಂದಿದೆ.

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರೋಷ್ನಿ ಚೆಲ್ಲಾನಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಈ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. 2025ರ ಮೇ ತಿಂಗಳಿನಲ್ಲಿ ಮದುವೆಯಾಗಿ ಕೇವಲ 15 ದಿನಗಳು ಕಳೆಯುವಷ್ಟರಲ್ಲಿ ಈ ದಂಪತಿ ಲೇ ಆಫ್ ಅಗ್ನಿಪರೀಕ್ಷೆಗೆ ಗುರಿಯಾಗಿದ್ದರು. ರೋಷ್ನಿ ಮತ್ತು ಅವರ ಪತಿ ಶುಭಂ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಕೆಲಸ ಹೋದ ಸುದ್ದಿಯನ್ನು ಮುಟ್ಟಿಸಿದ ರೀತಿ ಮಾತ್ರ ಸಂಪೂರ್ಣ ಭಿನ್ನವಾಗಿತ್ತು.

ರೋಷ್ನಿ ಕೆಲಸಕ್ಕೆ ಹಾಜರಾದ ಮೊದಲ ದಿನವೇ ಮ್ಯಾನೇಜರ್ ವಿಡಿಯೋ ಕಾಲ್ ಮೂಲಕ ಕೆಲಸ ಕಳೆದುಕೊಳ್ಳುತ್ತಿರುವ ವಿಷಯ ತಿಳಿಸಿದರು. ಆದರೆ ಆ ಸಂದರ್ಭದಲ್ಲಿ ಆ ಮ್ಯಾನೇಜರ್ ತೋರಿದ ಮಾನವೀಯತೆ ರೋಷ್ನಿಗೆ ಆತ್ಮವಿಶ್ವಾಸ ನೀಡಿತು. ಇದು ನಿನ್ನ ಕೆಲಸದ ವೈಫಲ್ಯವಲ್ಲ, ಬದಲಾಗಿ ಕಂಪನಿಯ ಕಡಿತದ ಪ್ರಕ್ರಿಯೆಯಷ್ಟೇ ಎಂದು ಧೈರ್ಯ ತುಂಬಿದರು. ರೋಷ್ನಿ ಮಾನಸಿಕವಾಗಿ ಕುಗ್ಗಿ ಹೋಗದಂತೆ ಸಾಂತ್ವನ ಹೇಳಿದ್ದಲ್ಲದೆ, ಮುಂದಿನ ಉದ್ಯೋಗಕ್ಕಾಗಿ ಬೇಕಾದ ಸಂಪನ್ಮೂಲಗಳನ್ನು ಹಂಚಿಕೊಂಡರು. ಇದರಿಂದಾಗಿ ರೋಷ್ನಿ ತಮ್ಮ ಆತ್ಮಗೌರವವನ್ನು ಉಳಿಸಿಕೊಂಡು ಧೈರ್ಯವಾಗಿ ಮುಂದಿನ ಸಂದರ್ಶನಗಳನ್ನು ಎದುರಿಸುವಂತಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಅವರ ಪತಿ ಶುಭಂ ಅವರಿಗೆ ಎದುರಾದ ಅನುಭವ ತದ್ವಿರುದ್ಧವಾಗಿತ್ತು. ಮನೆಯಲ್ಲಿ ಪತ್ನಿ ಸಂಕಷ್ಟದಲ್ಲಿರುವಾಗ ಆನ್‌ಲೈನ್ ಕಾಲ್ ಮೂಲಕ ವಿಷಯ ತಿಳಿಸಿ ಎಂದು ಕೇಳಿಕೊಂಡರೂ, ಶುಭಂ ಅವರ ಮ್ಯಾನೇಜರ್ ಒಪ್ಪಲಿಲ್ಲ. ಕಚೇರಿಗೆ ಕರೆಯಿಸಿ ಅತ್ಯಂತ ಕ್ರೂರವಾಗಿ ಮತ್ತು ಯಾಂತ್ರಿಕವಾಗಿ ಕೆಲಸ ಹೋದ ಸುದ್ದಿಯ ಬ್ರೋಷರ್ ಕೈಗಿಟ್ಟರು. ಈ ನಡೆ ಶುಭಂ ಅವರ ಆತ್ಮವಿಶ್ವಾಸವನ್ನೇ ಕುಸಿಯುವಂತೆ ಮಾಡಿತು.

ಒಂದೇ ದಿನ, ಒಂದೇ ಕಂಪನಿ ಮತ್ತು ಒಂದೇ ಫಲಿತಾಂಶವಾದರೂ ಇಬ್ಬರು ಮ್ಯಾನೇಜರ್‌ಗಳ ವರ್ತನೆ ಎರಡು ಜೀವಗಳ ಮೇಲೆ ಬೀರಿದ ಪ್ರಭಾವ ಮಾತ್ರ ಆಳವಾಗಿತ್ತು. ಕೆಟ್ಟ ಸುದ್ದಿಯನ್ನು ನೀಡುವುದು ಅನಿವಾರ್ಯವಾಗಿರಬಹುದು, ಆದರೆ ಅದನ್ನು ತಿಳಿಸುವ ರೀತಿ ಕ್ರೂರವಾಗಿರಬಾರದು ಎಂಬ ರೋಷ್ನಿ ಅವರ ಮಾತುಗಳು ಈಗ ಕಾರ್ಪೊರೇಟ್ ಜಗತ್ತಿಗೆ ಒಂದು ಪಾಠದಂತಿದೆ.

For Latest News Updates, Join Our Whatsapp Community🚩
RELATED ARTICLES

Most Popular