ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಖರೀದಿಸಿದ ಆಸ್ತಿ ಪರರ ಪಾಲಾದರೆ ಆ ನೋವು ಹೇಳತೀರದು. ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಚಿಗುರುತ್ತಿದ್ದಂತೆ, ಖಾಲಿ ಜಾಗ ಕಂಡರೆ ಸಾಕು ಭೂಗಳ್ಳರು ಕಣ್ಣಿಡುತ್ತಿದ್ದಾರೆ. ಭೂಮಿ ಕಬ್ಜಾ ಎನ್ನುವುದು ಕೇವಲ ಕಾನೂನು ಸಮಸ್ಯೆಯಲ್ಲ, ಅದು ಮಾಲೀಕರಿಗೆ ದೊಡ್ಡ ಮಾನಸಿಕ ಕಿರಿಕಿರಿಯೂ ಹೌದು. ಇಂತಹ ಸಂದರ್ಭದಲ್ಲಿ ಆಸ್ತಿ ಉಳಿಸಿಕೊಳ್ಳಲು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.
ಸಾಮಾನ್ಯವಾಗಿ ಭೂಮಿ ಅತಿಕ್ರಮಣವಾದಾಗ ಜನರು ನೇರವಾಗಿ ಪೊಲೀಸ್ ಠಾಣೆಗೆ ಧಾವಿಸುತ್ತಾರೆ. ಆದರೆ, ಇವು ಸಿವಿಲ್ (ನಾಗರಿಕ) ವಿವಾದಗಳ ಅಡಿಯಲ್ಲಿ ಬರುವುದರಿಂದ ಪೊಲೀಸರು ನೇರವಾಗಿ ಹಸ್ತಕ್ಷೇಪ ಮಾಡಲು ಮಿತಿಗಳಿರುತ್ತವೆ. ಇಂತಹ ಸಮಯದಲ್ಲಿ ‘ರಿಕವರಿ ಆಫ್ ಪೊಸೆಷನ್’ (Recovery of Possession) ಮೂಲಕ ನ್ಯಾಯಾಲಯದ ಮೊರೆ ಹೋಗುವುದೇ ಸರಿಯಾದ ಮಾರ್ಗ. ಒಂದು ವೇಳೆ ನಿಮ್ಮ ಭೂಮಿಯ ಮೇಲೆ ಯಾರಾದರೂ ಕಣ್ಣಿಟ್ಟಿದ್ದಾರೆ ಎಂದು ತಿಳಿದರೆ, ತಕ್ಷಣವೇ ‘ಇಂಜಕ್ಷನ್ ಆರ್ಡರ್’ (Injunction Order) ಅಥವಾ ತಡೆಯಾಜ್ಞೆ ತರುವುದರ ಮೂಲಕ ಅತಿಕ್ರಮಣವನ್ನು ಮುಂಚಿತವಾಗಿಯೇ ತಡೆಯಬಹುದು.
ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳು ವರ್ಷಗಟ್ಟಲೆ ನಡೆಯುವುದು ಸಂತ್ರಸ್ತರಿಗೆ ದೊಡ್ಡ ಶಾಪವಾಗಿದೆ. ಸಮನ್ಸ್ ನೀಡಿಕೆಯಲ್ಲಿ ವಿಳಂಬ ಮತ್ತು ಪದೇ ಪದೇ ಮುಂದೂಡಲ್ಪಡುವ ವಿಚಾರಣೆಗಳಿಂದ ಸಾಮಾನ್ಯ ಜನರು ಬೇಸತ್ತು ಹೋಗುತ್ತಿದ್ದಾರೆ. ಇದು ಅತಿಕ್ರಮಣದಾರರಿಗೆ ವರದಾನವಾಗಿ ಪರಿಣಮಿಸುತ್ತಿದೆ.
ಮತ್ತೊಂದೆಡೆ, ಭೂಮಿಯ ಮೌಲ್ಯ ಕೋಟಿಗಟ್ಟಲೆ ಇರುವುದರಿಂದ ಕೆಲವು ಕಡೆ ಪೊಲೀಸ್ ಠಾಣೆಗಳಲ್ಲೇ ಸೆಟಲ್ಮೆಂಟ್ ನಡೆಯುವುದು ಮತ್ತು ಅಧಿಕಾರಿಗಳ ಪರೋಕ್ಷ ಬೆಂಬಲ ಭೂಗಳ್ಳರಿಗೆ ಸಿಗುತ್ತಿರುವುದು ವಿಷಾದನೀಯ. ನ್ಯಾಯ ಶೀಘ್ರವಾಗಿ ದೊರೆಯಬೇಕಾದರೆ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ. ಕನಿಷ್ಠ ಒಂದು ವರ್ಷದೊಳಗೆ ತೀರ್ಪು ಬಂದರೆ ಮಾತ್ರ ಸಂತ್ರಸ್ತರಿಗೆ ನಿಜವಾದ ನೆಮ್ಮದಿ ಸಿಗಲು ಸಾಧ್ಯ.

