ಡೊನಾಲ್ಡ್ ಟ್ರಂಪ್ ಅವರು ಮತ್ತೆ ಇರಾನ್ ವಿರುದ್ಧ ರೊಚ್ಚಿಗೆದ್ದು ಕೂತಿದ್ದಾರೆ, ನಾನು ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಗುಡುಗಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈ ಮೂಲಕ ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಸಾರಿರುವ ಯುದ್ಧ ನಿಲ್ಲುವುದು ಅನುಮಾನ ಎನ್ನಲಾಗುತ್ತಿದೆ. ಇದು ಇಷ್ಟಕ್ಕೇ ಸುಮ್ಮನಾಗಿ, ಟ್ರಂಪ್ ಅವರ ಮಾತು ಮಾಮೂಲಿ ಆಗಿದ್ದರೆ ಭಯ ಆಗುತ್ತಿರಲಿಲ್ಲ ಈ ಜಗತ್ತಿಗೆ. ಆದರೆ ಇದೀಗ ಅಮೆರಿಕದ ಇತಿಹಾಸ ಮರೆಯಲು ಆಗದಷ್ಟು ವಿವಾದ ಮೈಮೇಲೆ ಹಾಕಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಶತ್ರು ಇರಾನ್ ವಿರುದ್ಧ ಹಿಂದೆಂದೂ ಕಂಡು ಕೇಳರಿಯದ ಮಟ್ಟದಲ್ಲಿ ದಾಳಿ ಮಾಡುವ ವಾರ್ನಿಂಗ್ ಕೊಟ್ಟು ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ. ಇದರಲ್ಲೇನು ವಿಶೇಷ ಗುರೂ ಅಂತಾ ಕೇಳಿದ್ರಾ? ಇಲ್ಲಿ ನೋಡಿ, ಅಕಸ್ಮಾತ್ ಅಮೆರಿಕ ಈಗ ಇರಾನ್ ವಿರುದ್ಧ ಪರಮಾಣು ಬಾಂಬ್ ಬಳಕೆ ಮಾಡಲು ಸಿದ್ಧತೆ ನಡೆಸಿದ್ರೆ?
ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಈಗ ತೈಲ ಟ್ಯಾಂಕರ್‌ಗಳ ರಕ್ಷಣೆಗೆ ಅಮೆರಿಕ ಸೇನೆ ಕಡೆಯಿಂದ ದಿಢೀರ್ ಯುದ್ಧನೌಕೆ ಕಳುಹಿಸುವ ವಿಚಾರ ಚರ್ಚೆಯಲ್ಲಿ ಇರುವಾಗಲೇ, ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಭಾರಿ ದೊಡ್ಡ ತಲ್ಲಣ ಎಬ್ಬಿಸಿದೆ. ಅಂದಹಾಗೆ ತನ್ನ ಪ್ರತಿಷ್ಠೆಯ ಪ್ರಶ್ನೆ ಬಂದರೆ ಅಮೆರಿಕ ಯಾರ ಮೇಲೆ ಬೇಕಾದ್ರೂ ದಾಳಿ ಮಾಡಲು ಸಿದ್ಧ ಹಾಗೂ ಯಾರನ್ನ ಬೇಕಾದರೂ ನಾಶ ಮಾಡಲು ಸಿದ್ಧವಾಗಿರುತ್ತದೆ. ಈಗಾಗಲೇ ಇತಿಹಾಸ ಈ ಬಗ್ಗೆ ಸಾರಿ ಸಾರಿ ಹೇಳುತ್ತಿದ್ದು, ಇರಾನ್ ಪಕ್ಕದಲ್ಲೇ ಇರುವ ಇರಾಕ್ ಕೂಡ ಇಂತಹದ್ದೇ ದೊಡ್ಡ ವಿನಾಶದ ಹಾದಿಯಲ್ಲಿ ತತ್ತರಿಸಿ ಹೋಗಿತ್ತು. ಆದರೆ ಇರಾನ್ ಮಾತ್ರ ಒಂದಷ್ಟು ಫೈಟ್ ಕೊಟ್ಟಿದ್ದು, ತನ್ನ ಬಳಿ ಇರುವ ಕ್ಷಿಪಣಿ ಬಳಸಿ ಅಮೆರಿಕ ಸೇನೆಯ ದಾಳಿಗೆ ಉತ್ತರ ನೀಡುತ್ತಿದೆ ಇರಾನ್ ಮಿಲಿಟರಿ. ಇಂತಹ ಸಮಯದಲ್ಲೇ ಅಮೆರಿಕ ಪರಮಾಣು ಬಾಂಬ್ ಬಳಕೆ ಮಾಡುತ್ತಾ? ಎಂಬ ಪ್ರಶ್ನೆ ಮೂಡಿದೆ.

ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಟ್ರಂಪ್
ಹೌದು, ಡೊನಾಲ್ಡ್ ಟ್ರಂಪ್ ಅವರು ಈಗ ರೊಚ್ಚಿಗೆದ್ದು ಕೂತಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿರುವುದೇ ಇರಾನ್ ವಿರುದ್ಧದ ಯುದ್ಧದಲ್ಲಿ ಎದುರಾಗುತ್ತಿರುವ ಸೋಲು. ಈವರೆಗಿನ ಅಂಕಿ & ಅಂಶ ಲೆಕ್ಕ ಹಾಕಿ ಹೇಳುವುದಾದರೆ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಲ್ಲಿ ಈವರೆಗೂ ಯಾರೂ ಗೆದ್ದಿಲ್ಲ, ಆದರೆ ಅಮೆರಿಕ ಮಾತ್ರ ಈ ಯುದ್ಧದಲ್ಲಿ ಭಾರಿ ದೊಡ್ಡ ಹಿನ್ನಡೆ ಅನುಭವಿಸುತ್ತಾ ಜಾಗತಿಕ ಮಟ್ಟದಲ್ಲಿ ವಿಲನ್ ಆಗುತ್ತಿದೆ. ತೈಲ ಬೆಲೆಯ ಏರಿಕೆ ಹಾಗೂ ಹೋರ್ಮುಜ್ ಜಲಸಂಧಿ ಬಂದ್ ಆಗಿರುವುದು ಈಗಿನ ಪರಿಸ್ಥಿತಿಯಲ್ಲಿ ಅಮೆರಿಕಗೆ ದೊಡ್ಡದಾಗಿ ಹಿನ್ನಡೆ ಮಾಡುತ್ತಿದೆ. ಇದೇ ಕಾರಣಕ್ಕೆ ಅಮೆರಿಕದ ಜೊತೆ ಸ್ನೇಹ ಇಟ್ಟುಕೊಂಡ ಆಪ್ತ ದೇಶಗಳ ಬಳಿ ಟ್ರಂಪ್ ಸಹಾಯ ಕೇಳಿ, ಯುದ್ಧ ನೌಕೆ ಕಳುಹಿಸಿ ಹೋರ್ಮುಜ್ ಜಲಸಂಧಿಗೆ ಮುಕ್ತಿ ಕೊಡಿಸೋಣ ಎಂದಿದ್ದರು. ಆದರೆ ಈ ರೀತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದ ಮನವಿಗೆ ನ್ಯಾಟೋ ದೇಶಗಳು ನೋ ಎಂಬ ಉತ್ತರ ನೀಡಿವೆ. ಹೀಗಾಗಿಯೇ ಅಂತಿಮವಾಗಿ ಅಮೆರಿಕ ಪರಮಾಣು ಬಾಂಬ್ ಬಳಸುತ್ತಾ? ಎಂಬ ಆತಂಕದ ಚರ್ಚೆ ಶುರುವಾಗಿದೆ ಈಗ.
ಇರಾನ್ ವಿರುದ್ಧ ಬಂಕರ್ ಬಾಂಬ್ ಬಳಕೆ
ಹೋರ್ಮುಜ್ ಜಲಸಂಧಿ ಭಾಗದಲ್ಲಿ ಈಗ ಅಮೆರಿಕ ಸೇನೆ ಟ್ರಂಪ್ ಅವರ ಆದೇಶದ ಹಿನ್ನೆಲೆ ಭಾರಿ ವಿನಾಶಕ ಬಾಂಬ್‌ಗಳ ಬಳಕೆ ಮಾಡುತ್ತಿದೆ. ಬಂಕರ್ ಬಸ್ಟರ್ ಎಂದರೆ ಬಂಕರ್‌ಗಳನ್ನ ಕೂಡ ನಾಶ ಮಾಡಬಹುದಾದ ಶಕ್ತಿ ಹೊ೦ದಿದ ಬಾಂಬ್ ಪ್ರಯೋಗ ಮಾಡುತ್ತಿದೆ. ಅದರಲ್ಲೂ ಹೋರ್ಮುಜ್ ಜಲಸಂಧಿ ಸುತ್ತಮುತ್ತ ಇರುವ ಬಂಕರ್ ಮೇಲೆ ದಾಳಿ ಮಾಡುತ್ತಿರುವ ಅಮೆರಿಕ ಸೇನೆ, ಇರಾನ್ ತನ್ನ ಕ್ಷಿಪಣಿಗಳನ್ನು ಭದ್ರವಾಗಿ ನೆಲದ ಅಡಿ ಇಟ್ಟಿರುವ ಬಂಕರ್‌ಗಳ ಮೇಲೆ ದಾಳಿ ಮಾಡಿ ಎಲ್ಲವನ್ನೂ ನಾಶ ಮಾಡುತ್ತಿದೆ. ಹಾಗೇ ಈ ಯುದ್ಧ ಇನ್ನಷ್ಟು ತೀವ್ರವಾದರೆ ಪರಮಾಣು ಬಾಂಬ್ ಬಳಕೆ ಆಗಬಹುದಾದ ಆತಂಕ ಇದ್ದು, ಇನ್ನೊಂದು ಕಡೆ ಇರಾನ್ ಕೂಡ ಪರಮಾಣು ಬಾಂಬ್ ಬಳಕೆ ಮಾಡುತ್ತಾ? ಈಗಾಗಲೇ ಇರಾನ್ ಬಳಿ ಪರಮಾಣು ಬಾಂಬ್ ಸಿದ್ಧವಾಗಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ. ಈ ಮೂಲಕ ಸದ್ದೇ ಇಲ್ಲದೆ ಜಗತ್ತಿನಲ್ಲಿ 3ನೇ ಮಹಾಯುದ್ಧಕ್ಕೆ ರಣಕಹಳೆ ಮೊಳಗಿದೆ.

