ಬೆಂಗಳೂರು: ಐಪಿಎಲ್ ಟಿಕೆಟ್ ವಿಚಾರವಾಗಿ ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಆರ್ಸಿಬಿ ಮತ್ತು ಡಿಎನ್ಎ ಪ್ರತಿನಿಧಿಗಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಶಾಸಕರಿಗೆ ಮೂರು ಟಿಕೆಟ್ ನೀಡಲು ಅಂತಿಮವಾಗಿ ಒಪ್ಪಿಗೆ ನೀಡಲಾಗಿದೆ. ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೀಟು ಸಂಖ್ಯೆ ಹೆಚ್ಚಳ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಮೂರು ಟಿಕೆಟ್ ಸಿಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಅಂತರಾಷ್ಟ್ರೀಯ ಪಂದ್ಯಗಳಿಗೆ ಎರಡು ಟಿಕೆಟ್ ಉಚಿತ ಮತ್ತು ಎರಡು ಟಿಕೆಟ್ ಗಳನ್ನು ಹಣ ಕೊಟ್ಟು ಪಡೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಶಾಸಕರಿಗೆ ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ಇಲ್ಲದಿರುವ ಬಗ್ಗೆ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೀಟು ಹೆಚ್ಚಳಕ್ಕೆ ಚರ್ಚೆ ನಡೆಸಲಾಗಿದೆ. 20 ಸಾವಿರದಷ್ಟು ಸೀಟು ಹೆಚ್ಚಳ ಮಾಡಿದರೆ ಅನುಕೂಲವಾಗುತ್ತದೆ. ಸದ್ಯ 35,000 ಮಂದಿ ಕ್ರಿಕೆಟ್ ನೋಡಬಹುದಾಗಿದ್ದು, ಇನ್ನು 20 ಸಾವಿರ ಸೀಟು ಹೆಚ್ಚಳಕ್ಕೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಪ್ರತಿನಿಧಿಗಳಾದ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಎಂಡಿ ವೆಂಕಟ್, ಮುಖ್ಯ ಸಂವಹನ ಅಧಿಕಾರಿ ವಿನಯ್ ಮೃತ್ಯುಂಜಯ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಇಒ ರಾಜೇಶ್ ಮೆನನ್ ಅವರೊಂದಿಗೆ ಸಭೆ ನಡೆಸಲಾಯಿತು.

