ಇಂದು ( ಏಪ್ರಿಲ್ 30 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 42ನೇ ಪಂದ್ಯ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಗುಜರಾತ್ ಟೈಟನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಕಣಕ್ಕಿಳಿದರು. ಬೆಥೆಲ್ ಕೇವಲ 5 ರನ್‌ಗೆ ವಿಕೆಟ್ ಒಪ್ಪಿಸಿದರೆ, ರಬಾಡಾ ಎಸೆದ ಎರಡನೇ ಒವರ್‌ನಲ್ಲಿ ಸತತ ಐದು ಬೌಂಡರಿ ಚಚ್ಚಿದ್ದ 13 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗೆ ಕೇವಲ 39 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೇವದತ್ ಪಡಿಕ್ಕಲ್ ಹಾಗೂ ರಜತ್ ಪಟಿದಾರ್ ಜೋಡಿ ಸುಧಾರಣೆ ತರುತ್ತಿದ್ದ ಸಂದರ್ಭದಲ್ಲೇ ಅರ್ಷದ್ ಖಾನ್ ಎಸೆದ ಎಂಟನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರಜತ್ ಸಿಕ್ಸರ್ ಬಾರಿಸುವ ಯತ್ನ ಮಾಡಿದರು.
ಡೀಪ್ ಫೈನ್ ಲೆಗ್ ಬೌಂಡರಿ ಬಳಿ ಜೇಸನ್ ಹೋಲ್ಡರ್ ರೋಚಕ ಕ್ಯಾಚ್ ಪಡೆದರು. ಆದರೆ ಹೋಲ್ಡರ್ ಕ್ಯಾಚ್ ಪಡೆಯುತ್ತಿದ್ದಾಗಲೇ ಚೆಂಡು ನೆಲಕ್ಕೆ ತಾಗಿದೆಯಾ ಎಂದು ಪರಿಶೀಲನೆ ನಡೆಸಿದ ಥರ್ಡ್ ಅಂಪೈರ್ ಔಟ್ ನೀಡಿದರು.
ಆದರೆ ಈ ನಿರ್ಣಯ ವಿರಾಟ್ ಕೊಹ್ಲಿಗೆ ಸಮಾಧಾನ ನೀಡಲಿಲ್ಲ. ಚೆಂಡು ನೆಲಕ್ಕೆ ತಾಗಿದೆ ಎಂದು ಅಂಪೈರ್ ಜತೆ ಚರ್ಚೆಗೆ ಇಳಿದರು. ಕೊಹ್ಲಿ ಅಸಮಾಧಾನಗೊಂಡಿರುವುದು ಅವರ ಮುಖದಲ್ಲಿ ಎದ್ದುಕಾಣುತ್ತಿತ್ತು.
ಕೊಹ್ಲಿ ಮಾತ್ರವಲ್ಲದೇ ನೆಟ್ಟಿಗರೂ ಸಹ ಈ ವಿಡಿಯೊವನ್ನು ಹಂಚಿಕೊಂಡು ಇದು ನಾಟ್‌ಔಟ್ ಎಂದು ವಾದಿಸುತ್ತಿದ್ದಾರೆ.

