ನಿನ್ನೆ ( ಮೇ 22 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್‌ಗಳ ಅಮೋಘ ಗೆಲುವು ದಾಖಲಿಸಿತು.
ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಈ ಪಂದ್ಯದ ಫಲಿತಾಂಶ ಪ್ಲೇಆಫ್ ಸುತ್ತಿನ ಪಂದ್ಯಗಳ ನಿರ್ಧಾರ ಮಾಡುತ್ತಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.
ಆರ್‌ಸಿಬಿ ಉತ್ತನ ನೆಟ್ ರನ್‌ರೇಟ್ ಹೊಂದಿದ್ದ ಕಾರಣ 166 ರನ್ ಕ್ರಾಸ್ ಮಾಡಿದ್ರೆ ಟಾಪ್ 2 ಸ್ಥಾನ ಸಿಗುವುದು ಪಕ್ಕಾ ಆಗಿತ್ತು. 200 ರನ್ ಬಾರಿಸಿದ ಕಾರಣ ಟಾಪ್ 1 ಸ್ಥಾನ ಪಕ್ಕಾ ಆಯಿತು ಹಾಗೂ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಒಂದೆಡೆ ತಂಡ ಸೋತರೂ ಕ್ವಾಲಿಫಯರ್‌ಗೆ ಆರ್‌ಸಿಬಿ ಕ್ವಾಲಿಫಯರ್ ಆದರೆ ಮತ್ತೊಂದೆಡೆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬೇಡದ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಹೌದು, ಪ್ಯಾಟ್ ಕಮಿನ್ಸ್ ಬೌಲಿಂಗ್ ವೇಳೆ ವಿರಾಟ್ ಕೊಹ್ಲಿ ಸತತ ಬೌಂಡರಿ ಬಾರಿಸುತ್ತಿದ್ದರು. ಈ ವೇಳೆ ಕಮಿನ್ಸ್‌ಗೆ ಟ್ರಾವಿಸ್ ಹೆಡ್ ಸಲಹೆ ನೀಡಲು ಮುಂದಾದರು.
ಈ ವೇಳೆ ಮೂಗು ತೂರಿಸಿದ ಕೊಹ್ಲಿ ಟ್ರಾವಿಸ್ ಹೆಡ್‌ಗೆ ನೀನೇ ಬೌಲಿಂಗ್ ಮಾಡು ಬಾ ಎಂದು ಆಹ್ವಾನಿಸಿದರು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಹೆಡ್ ನಾನು ಬೌಲಿಂಗ್‌ಗೆ ಬರುವಷ್ಟರಲ್ಲಿ ನೀನು ಔಟ್ ಆಗಿರುತ್ತೀಯ ಎಂದು ನಯವಾಗಿಯೇ ಕೌಂಟರ್ ಕೊಟ್ಟರು. ತನ್ನ ತಂಡದ ಆಟಗಾರರನ್ನು ಕೆಣಕಿದರೆ ಗಂಭೀರವಾಗಿ ಪರಿಗಣಿಸುವ ನಾಯಕ ಕಮಿನ್ಸ್ ಬೇಕಂತಲೇ ಹೆಡ್‌ಗೆ ಒಂದು ಓವರ್ ಬೌಲಿಂಗ್ ಮಾಡಲು ಕೊಟ್ಟರು. ಅದೇ ಓವರ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಟಿದಾರ್ ವಿಕೆಟ್ ಬಿತ್ತು. ಈ ಮೂಲಕ ಹೆಡ್ ಬೌಲಿಂಗ್ ಸಲಹೆಯನ್ನು ಗೇಲಿ ಮಾಡಿದ್ದ ಕೊಹ್ಲಿಗೆ ಮೊದಲ ಮುಖಭಂಗವಾಯಿತು.
ಈ ಘಟನೆಯನ್ನು ಇಲ್ಲಿಗೇ ಬಿಡದ ಕೊಹ್ಲಿ ಪಂದ್ಯ ಮುಗಿದ ಬಳಿಕವೂ ಸಹ ತನ್ನ ಮೊಂಡಾಟವನ್ನು ಮುಂದುವರಿಸಿದರು. ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿದರು. ಟ್ರಾವಿಸ್ ಹೆಡ್ ಕೊಹ್ಲಿಗೆ ಕೈಕುಲುಕಲು ಬಂದಾಗ ಕೊಹ್ಲಿ ಕೈಕುಲುಕದೇ ಹಾಗೆಯೇ ನಡೆದು ತನ್ನ ಸಣ್ಣತನವನ್ನು ತೋರಿಸಿದರು.
ಆಟದ ಸಮಯದಲ್ಲಿ ಏನೇ ಆಗಲಿ ಅದು ಆಟ ಮುಗಿದ ಬಳಿಕ ಮುಕ್ತಾಯವಾಗಬೇಕು, ಬಳಿಕ ಆಟಗಾರರು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಸರಿಹೋಗಬೇಕು. ಅದುವೇ ಜಂಟಲ್‌ಮನ್‌ಗಳ ಆಟ ಎನಿಸಿಕೊಳ್ಳುವ ಕ್ರಿಕೆಟ್‌ನ ಮುಖ್ಯ ಅಂಶ ಹಾಗೂ ಕ್ರೀಡಾಸ್ಪೂರ್ತಿ.
ಆದರೆ ಕೊಹ್ಲಿ ಕೈ ಕುಲುಕದೇ ತೆರಳಿದ್ದು, ಈ ವಿಡಿಯೊ ಸದ್ಯ ಕೊಹ್ಲಿ ತಾನು ಮಾಡಿರುವ ಹೆಸರಿನಷ್ಟು ದೊಡ್ಡ ವ್ಯಕ್ತಿಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಂದು ಸಣ್ಣ ವಿವಾದವನ್ನು ಮನಸಿನಲ್ಲಿಟ್ಟುಕೊಂಡು ಚಿಕ್ಕ ಮಕ್ಕಳಂತೆ ಆಡುವ ಈತ ಯಾರಿಗೆ ಸ್ಪೂರ್ತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

