ನಿನ್ನೆ ( ಏಪ್ರಿಲ್ 27 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್‌ಗಳ ಪ್ರಚಂಡ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೌಲಿಂಗ್ ಆರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 16.3 ಓವರ್‌ಗಳಲ್ಲಿ 75 ರನ್‌ಗೆ ಆಲ್‌ಔಟ್ ಆಗಿ ಆರ್‌ಸಿಬಿಗೆ 76 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿತು.
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಅದನ್ನು ಕೇವಲ 39 ಎಸೆತಗಳಲ್ಲಿ ಚೇಸ್ ಮಾಡಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದ ಎರಡನೇ ಅತಿ ವೇಗದ ಚೇಸ್ ದಾಖಲೆಯನ್ನು ನಿರ್ಮಿಸಿತು.
ಇದರ ಜತೆಗೆ ತಂಡದ ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ ದಾಖಲೆಯೊಂದರಲ್ಲಿ ಮತ್ತೊಂದು ಹಂತವನ್ನು ಮುಟ್ಟಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದರು. ಹೌದು. ನಿನ್ನೆಯ ಪಂದ್ಯದಲ್ಲಿ 15 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 9000 ರನ್ ಮೈಲಿಗಲ್ಲು ಮುಟ್ಟಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದಿದ್ದಾರೆ.
ನಿನ್ನೆಯ ಪಂದ್ಯದ ಮುಕ್ತಾಯದ ವೇಳೆಗೆ ಕೊಹ್ಲಿ 9012 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಇಂಥ ಬೃಹತ್ ಸಾಧನೆಯನ್ನು ಮಾಡುತ್ತಿದ್ದಂತೆ ಮೈದಾನದ ಡಿಸ್‌ಪ್ಲೇನಲ್ಲಿ 9000 ರನ್ ಪೂರೈಸಿದ್ದನ್ನು ಪ್ರಕಟಿಸಲಾಯಿತು. ಈ ವೇಳೆ ಅದನ್ನು ಗಮನಿಸಿದ ಕೊಹ್ಲಿ ಬ್ಯಾಟ್ ಎತ್ತಿ ಸಂಭ್ರಮಿಸದೇ ಬ್ಯಾಟಿಂಗ್ ಮುಂದುವರಿಸುವ ಮೂಲಕ ತನಗೆ ವೈಯಕ್ತಿಕ ಮೈಲಿಗಲ್ಲು ಮುಖ್ಯವಲ್ಲ ಎಂಬುದನ್ನು ಮತ್ತೊಂದು ಸಾರಿ ಹೇಳಿದರು.

