ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಅತಿಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಕಂಪನಿ 16500 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿ ಮಾಲೀಕತ್ವವನ್ನು ಪಡೆದುಕೊಂಡಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಶ್ವದಲ್ಲೇ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಕ್ರಿಕೆಟ್ ತಂಡ ಎಂಬ ಮಹಾ ದಾಖಲೆಯನ್ನೇ ಬರೆದಿದೆ. ಹೀಗೆ ಬೃಹತ್ ಮೊತ್ತಕ್ಕೆ ಮಾರಾಟವಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಪಾರುಪತ್ಯ ಮೆರೆದಿರುವ ಆರ್‌ಸಿಬಿ ಉಗಮದ ಕುರಿತು ಸುದ್ದಿಗಳು ಹಾಗೂ ಪೋಸ್ಟ್‌ಗಳು ಹರಿದಾಡುತ್ತಿದ್ದು, ಮೊದಲ ಆವೃತ್ತಿಯಲ್ಲಿ ತಂಡ 450 ಕೋಟಿ ರೂಪಾಯಿಗೆ ವಿಜಯ್ ಮಲ್ಯ ಪಾಲಾದದ್ದನ್ನು ಮೆಲುಕು ಹಾಕಲಾಗುತ್ತಿದೆ.
ಈ ಕುರಿತು ಇದೀಗ ಸ್ವತಃ ವಿಜಯ್ ಮಲ್ಯ ಸಹ ಪ್ರತಿಕ್ರಿಯಿಸಿದ್ದು, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿಯ ನೂತನ ಮಾಲೀಕರಿಗೆ ಶುಭಾಶಯ ಕೋರಿರುವ ವಿಜಯ್ ಮಲ್ಯ 2008ರಲ್ಲಿ ತಾನು ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿದಾಗ ಅದರ ಮೌಲ್ಯ 450 ಕೋಟಿ ರೂಪಾಯಿಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅಂದು ಆರ್‌ಸಿಬಿ ಖರೀದಿಸಲು ಮುಂದಾದಾಗ ಹಲವಾರು ಮಂದಿ ನನ್ನನ್ನು ನೋಡಿ ನಕ್ಕರು ಹಾಗೂ ಟೀಕಿಸಿದರು. ರಾಯಲ್ ಚಾಲೆಂಜ್ ಬ್ರಾಂಡ್ ಕಟ್ಟುತ್ತಿದ್ದ ನಾನು ತಂಡಕ್ಕೆ ರಾಯಲ್ ಚಾಲೆಂಜರ್ಸ್ ಎಂದು ಹೆಸರಿಟ್ಟೆ. ಇಂದು ಅದೇ ತಂಡ 16500 ಕೋಟಿ ರೂಪಾಯಿ ಮೊತ್ತ ತಲುಪಿರುವುದು ಬಹಳ ಸಂತಸ ತಂದಿದೆ. ಆರ್‌ಸಿಬಿ ಸದಾ ನನ್ನ ಡಿಎನ್‌ಎ ಜೊತೆ ಇರಲಿದೆ. ವಿಶ್ವ ಶ್ರೇಷ್ಟ ವಿರಾಟ್ ಕೊಹ್ಲಿಯನ್ನು ಆರಿಸಿದ್ದು ಎಂದೂ ಮರೆಯಲಾಗದ ನೆನಪು. ನಾನು ಆರ್‌ಸಿಬಿಯನ್ನು ಖರೀದಿಸಿದಾಗ ಸಾಕ್ಷಿಯಾದ ಹಾಗೂ ನಂತರ ಬೆಂಬಲಿಸಿದ ಅಭಿಮಾನಿಗಳಿಗೆ ನಾನೆಂದೂ ಚಿರಋಣಿ. ಬೆಂಗಳೂರಿನ ಸಿಂಹ ಆರ್‌ಸಿಬಿಯನ್ನು ಹೀಗೆಯೇ ಬೆಂಬಲಿಸಿ ಎಂದು ಮಲ್ಯ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

