ನಿನ್ನೆ ( ಏಪ್ರಿಲ್ 5 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಬೃಹತ್ ಗೆಲುವನ್ನು ಕಂಡು ಟೂರ್ನಿಯಲ್ಲಿ ಎರಡನೇ ಜಯವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿ ಚೆನ್ಮೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ 207 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿತು.
ಆರಂಭಿಕರಿಂದ ಸಾಮಾನ್ಯ ಆರಂಭ ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದೇವದತ್ ಪಡಿಕಲ್, ನಾಯಕ ರಜತ್ ಹಾಗೂ ಟೀಮ್ ಡೇವಿಡ್ ಅಬ್ಬರಿಸಿ ಬೊಬ್ಬೆರಿದರು. ಟಿಮ್ ಡೇವಿಡ್ ಮೊದಲ ಆರು ಎಸೆತಗಳಲ್ಲಿ ನಿಧಾನಗತಿಯ ಆಟವನ್ನಾಡಿ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಿಕ್ಸರ್ ಮಳೆ ಸುರಿಸಿದ ಟಿಮ್ ಡೇವಿಡ್ ಓವರ್ಟನ್ ಎಸೆದ 19ನೇ ಓವರ್ ನಲ್ಲಿ 3 ಸಿಕ್ಸರ್ ಸಹಿತ 30 ರನ್ ಚಚ್ಚಿದರು. ಈ ಪೈಕಿ ಕೊನೆಯ ಎಸೆತಕ್ಕೆ ಬಾರಿಸಿದ ಸಿಕ್ಸರ್ ಪವರ್ ಎಷ್ಟಿತ್ತೆಂದರೆ ಚೆಂಡು ಕ್ರೀಡಾಂಗಣವನ್ನು ದಾಟಿ ಆಚೆ ಬಿದ್ದಿತ್ತು. ಹೀಗೆ ಟಿಮ್ ಡೇವಿಡ್ ಅಬ್ಬರದ ಹೊಡೆತಕ್ಕೆ ಸ್ಟೇಡಿಯಂ ದಾಟಿದ್ದ ಚೆಂಡು ಎಲ್ಲಿ ಹೋಗಿರಬಹುದು ಎಂದು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು..
ಹೀಗೆ ಹೊರಬಿದ್ದ ಚೆಂಡು ಪಂದ್ಯಕ್ಕೆ ಟಿಕೆಟ್ ಸಿಗದೇ ಕ್ರೀಡಾಂಗಣದಿಂದ ಹೊರಗೆ ನಿಂತಿದ್ದ ಹೊಸಪೇಟೆ ಮೂಲದ ಅಭಿಮಾನಿಗಳ ಕೈ ಸೇರಿದೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಅಭಿಮಾನಿಗಳು ಕ್ರೀಡಾಂಗಣದಿಂದ ಚೆಂಡು ಆಚೆ ಬೀಳುತ್ತಿದ್ದನ್ನು ಕಂಡು ಓಡಿ ಹೋಗಿ ಚೆಂಡನ್ನು ಎತ್ತಿಕೊಂಡಿದ್ದಾರೆ.
ಬಳಿಕ 300 ಕಿಲೋಮೀಟರ್ ಪ್ರಯಾಣ ಮಾಡಿ ಬಂದ್ರೆ ಟಿಕೆಟ್ ಸಿಗಲಿಲ್ಲ, ಈಗ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಚೆಂಡು ಸಿಕ್ಕಿದೆ ಎಂದು ಸಂತಸದಿಂದ ಕುಣಿದು ಕುಪ್ಪಳಿಸಿದ್ದಾರೆ.

