ನಿನ್ನೆ ( ಏಪ್ರಿಲ್ 5 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಬಾರಿ ಟೂರ್ನಿಯ ಎರಡನೇ ಗೆಲುವಿಗೆ ಸಾಕ್ಷಿಯಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿ ಚೆನ್ಮೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ 207 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಬೃಹತ್ ಗೆಲುವನ್ನು ಕಂಡು ಟೂರ್ನಿಯಲ್ಲಿ ಎರಡನೇ ಜಯವನ್ನು ದಾಖಲಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾನ್ಯ ಆರಂಭ ಪಡೆದುಕೊಂಡರೂ ಪಡಿಕ್ಕಲ್, ರಜತ್ ಹಾಗೂ ಟಿಮ್ ಡೇವಿಡ್ ಅಬ್ಬರದ ಆಟದ ನೆರವಿನಿಂದ ಈ ಬೃಹತ್ ಮೊತ್ತವನ್ನು ಕಲೆಹಾಕಿತು. ಟಿಮ್ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆದರೆ ಟಿಮ್ ಡೇವಿಡ್ 15 ಎಸೆತಗಳಲ್ಲಿ 28 ರನ್ ಕಲೆಹಾಕಿದ್ದಾಗಲೇ ವಿಕೆಟ್ ಒಪ್ಪಿಸಿದ್ದರು. ಹೌದು, ಅಂಶುಲ್ ಕಾಂಬೊಜ್ ಎಸೆದ 18ನೇ ಓವರ್ ನ ಐದನೇ ಎಸೆತದಲ್ಲಿ ಟಿಮ್ ಬೌಲ್ಡ್ ಆಗಿದ್ದರು. ಆದರೆ ಅದು ನೋ ಬಾಲ್ ಡೆಲಿವರಿ ಆಗಿದ್ದ ಕಾರಣ ಕಣದಲ್ಲಿ ಉಳಿದುಕೊಂಡು ಬಳಿಕ ಅಬ್ಬರಿಸಿದರು.
ಹೀಗೆ ಟಿಮ್ ಡೇವಿಡ್ ಬೌಲ್ಡ್ ಆಗುತ್ತಿದ್ದಂತೆ ಬೌಲರ್ ಅಂಶುಲ್ ಕಾಂಬೊಜ್ ಕಿರುಚುತ್ತಾ ವಿಕೆಟ್ ಸಂಭ್ರಮಾಚಾರಣೆ ಮಾಡತೊಡಗಿದರು. ಈ ಸಮಯದಲ್ಲಿ ಟಿಮ್ ಡೇವಿಡ್ ನಡೆ ಸದ್ಯ ಎಲ್ಲರ ಮನಗೆದ್ದಿದೆ. ಕಿರುಚುತ್ತಾ ತನ್ನ ಮುಂದೆ ಎಗರಿ ಕುಣಿಯುತ್ತಿದ್ದ ಬೌಲರ್ ಕೈಗೆ ತನ್ನ ಕೈ ತಾಗಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಟಿಮ್ ಈ ಪ್ರತಿಕ್ರಿಯೆ ಕಂಡು ಕಿರುಚಾಡಿದ್ದ ಕಾಂಬೊಜ್ ಕೂಡಲೇ ಸೈಲೆಂಟ್ ಆಗಿಬಿಟ್ಟರು. ಈ ಕ್ರೀಡಾಸ್ಪೂರ್ತಿ ಸದ್ಯ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

