HomeIPL 2026IPL 2026: ಹೈದರಾಬಾದ್ ಬೌಲಿಂಗ್ ದಾಳಿಗೆ ನಲುಗಿದ ರಾಜಸ್ಥಾನ್

IPL 2026: ಹೈದರಾಬಾದ್ ಬೌಲಿಂಗ್ ದಾಳಿಗೆ ನಲುಗಿದ ರಾಜಸ್ಥಾನ್

ಹೈದರಾಬಾದ್: ನಾಯಕ ಇಶಾನ್ ಕಿಶನ್ ಅವರ ಅರ್ಧಶತಕ ಹಾಗೂ ಪ್ರಫುಲ್ ಹಿಂಗೆ ಮತ್ತು ಸಕೀಬ್ ಹೊಸೈನ್ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಇದರೊಂದಿಗೆ ಎಸ್‌ಆರ್‌ಹೆಚ್ 2ನೇ ಗೆಲುವು ಸಾಧಿಸಿದರೇ, ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತ್ತು.

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್‍ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ 217 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 18 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟಾಯಿತು. ಆ ಮೂಲಕ ಎಸ್‌ಆರ್‌ಹೆಚ್ ಗೆಲುವಿನ ನಗೆ ಬೀರಿತು. ಮೊದಲ ಓವರ್‌ನಲ್ಲೇ ದಾಖಲೆಯ 3 ವಿಕೆಟ್ ಕಬಳಿಸಿದ ಪ್ರಫುಲ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಮೊದಲ ಓವರ್‌ನಲ್ಲೇ ಪ್ರಫುಲ್ ಹಿಂಗೆ ಮಾರಕ ದಾಳಿಗೆ ತಬ್ಬಿಬ್ಬಾಗಿ ಹೋಯಿತು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮೊದಲ ಓವರ್‌ನಲ್ಲೇ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ಲೂನ್ ಡ್ರೆ ಪ್ರಿಟೋರಿಯಸ್ ಮೂವರನ್ನೂ ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಅಲ್ಲದೇ ಐಪಿಎಲ್ ಇತಿಹಾಸದಲ್ಲೇ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ 3 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹಿರಿಮೆಗೆ ಪ್ರಫುಲ್ ಹಿಂಗೆ ಪಾತ್ರರಾದರು. ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸಕೀಬ್ ಹುಸೈನ್ ರಾಯಲ್ಸ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಮೂರನೇ ಓವರ್‌ನಲ್ಲಿ ರಿಯಾನ್ ಪರಾಗ್ 4 ರನ್ ಗಳಿಸಿ, ಪ್ರಫುಲ್‌ಗೆ ನಾಲ್ಕನೇ ಬಲಿಯಾದರು. ಆಗ ರಾಜಸ್ಥಾನ ರಾಯಲ್ಸ್ ತಂಡದ ಮೊತ್ತ 3 ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ ಕೇವಲ 9 ರನ್ ಆಗಿತ್ತು.

ಈ ವೇಳೆ 6ನೇ ವಿಕೆಟ್‌ಗೆ ಜೊತೆಯಾದ ಡೊನೊವನ್ ಪೆರೆರಿಯಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 72 ಎಸೆತಗಳಲ್ಲಿ 118 ರನ್‌ಗಳ ಜತೆಯಾಟವಾಡಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಡೊನೊವನ್ ಪೆರೆರಿಯಾ 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಒಳಗೊಂಡ 69 ರನ್ ಗಳಿಸಿ ಔಡಾದರೇ, ಜಡೇಜಾ 45, ತುಷಾರ್ ದೇಶಪಾಂಡೆ 25 ರನ್ ಗಳಿಸಿದರು. ಎಸ್‌ಆರ್‌ಹೆಚ್ ಪರ ಪ್ರಫುಲ್ ಹಿಂಗೆ, ಸಕೀಬ್ ಹೊಸೈನ್ ತಲಾ 4, ಇಶಾನ್ ಮಲಿಂಗಾ 2 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನಾ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಪರ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಟ್ರಾವಿಸ್ ಹೆಡ್ ಕೂಡ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ನಾಯಕನಿಗೆ ತಕ್ಕ ಆಟವಾಡಿದ ಇಶಾನ್ ಕಿಶನ್ ಕೇವಲ 44 ಎಸೆತಗಳಲ್ಲಿ 6 ಸಿಕ್ಸರ್, 8 ಬೌಂಡರಿ ಒಳಗೊಂಡ 91 ರನ್ ಗಳಿಸಿ ನಿರ್ಗಮಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹೆನ್ರಿಚ್ ಕ್ಲಾಸೆನ್ ಬಿರುಸಿನ 40 ರನ್ ಗಳಿಸಿ ಔಟಾದರು. ಉಳಿದಂತೆ ನಿತೀಶ್ ಕುಮಾರ್ ರೆಡ್ಡಿ 28, ಸಲಿಲ್ ಆರೋರ 24 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ರಾಜಸ್ಥಾನದ ಪರ ಜೋಫ್ರಾ ಆರ್ಚರ್ 2, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ರಿಯಾನ್ ಪರಾಗ್ ಹಾಗೂ ನಾಂದ್ರೆ ಬರ್ಗರ್ ಒಂದೊಂದು ವಿಕೆಟ್ ಉರುಳಿಸಿದರು. ಪ್ರಫುಲ್ ಹಿಂಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular