HomeIPL 2026IPL 2026: ವೈಭವ್, ಜುರೆಲ್ ಅಬ್ಬರಕ್ಕೆ ಮಕಾಡೆ ಮಲಗಿದ ಆರ್‌ಸಿಬಿ ಬೌಲರ್ಸ್; ಸೋಲುಂಡ ಬೆಂಗಳೂರು

IPL 2026: ವೈಭವ್, ಜುರೆಲ್ ಅಬ್ಬರಕ್ಕೆ ಮಕಾಡೆ ಮಲಗಿದ ಆರ್‌ಸಿಬಿ ಬೌಲರ್ಸ್; ಸೋಲುಂಡ ಬೆಂಗಳೂರು

ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಗೆಲುವು ಕಂಡಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.

ಆರ್‌ಸಿಬಿ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಜೋಫ್ರಾ ಆರ್ಚರ್ ಎಸೆದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಹೀಗೆ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ ಆರ್‌ಸಿಬಿ ಪರ ಎರಡನೇ ವಿಕೆಟ್‌ಗೆ ಜತೆಯಾದ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ 45 ರನ್‌ಗಳ ಜತೆಯಾಟವನ್ನಾಡಿದರು. ಪಡಿಕ್ಕಲ್ 7 ಎಸೆತಗಳಲ್ಲಿ 14 ರನ್ ಗಳಿಸಿದರು. ಬೆನ್ನಲ್ಲೇ ಕೊಹ್ಲಿ 16 ಎಸೆತಗಳಲ್ಲಿ 32 ರನ್ ಗಳಿಸಿ ರವಿ ಬಿಷ್ಣೋಯಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಕೃನಾಲ್ ಪಾಂಡ್ಯ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜಿತೇಶ್ ಶರ್ಮಾ 5 ಹಾಗೂ ಟಿಮ್ ಡೇವಿಡ್ 13 ರನ್‌ಗೆ ಔಟ್ ಆದರು. ನಂತರ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ 11 ಎಸೆತಗಳಲ್ಲಿ 22 ರನ್ ಗಳಿಸಿದರಾದರೂ ಹೆಚ್ಚುಕಾಲ ಕಣದಲ್ಲಿ ಉಳಿಯಲಿಲ್ಲ. ಹೀಗೆ 127 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಹೀಗೆ ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ನಾಯಕ ರಜತ್ ಪಟಿದಾರ್ ಏಕಾಂಗಿ ಹೋರಾಟ ನಡೆಸಿದರು. ಈ ಸಮಯದಲ್ಲಿ ಪಟಿದಾರ್‌ ಜತೆ ಮತ್ತೊಬ್ಬ ಬ್ಯಾಟಿಂಗ್ ಸಾಮರ್ಥ್ಯವಿರುವ ಆಟಗಾರ ಬೇಕೆಂದು ವೆಂಕಟೇಶ್ ಐಯ್ಯರ್‌ರನ್ನು ಕರೆತರಲಾಯಿತು. ಕೆಲ ಸಮಯದಲ್ಲೇ ರಜತ್ ಪಟಿದಾರ್ 40 ಎಸೆತಗಳಲ್ಲಿ 63 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕೊನೆಯ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ವೆಂಕಟೇಶ್ ಐಯ್ಯರ್ 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 29 ರನ್ ಹಾಗೂ ಭುವನೇಶ್ವರ್ ಕುಮಾರ್ ಅಜೇಯ 9 ರನ್ ಕಲೆಹಾಕಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ರವಿ ಬಿಷ್ಣೋಯಿ ಹಾಗೂ ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಕೇವಲ 13 ರನ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 21 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ಮತ್ತೋರ್ವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ 108 ರನ್‌ಗಳ ಜತೆಯಾಟವಾಡಿದರು. ವೈಭವ್ ಸೂರ್ಯವಂಶಿ ಅಬ್ಬರಿಸಿ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 78 ರನ್ ಚಚ್ಚಿದರು. ವೈಭವ್ ವಿಕೆಟ್ ಬಿದ್ದ ಬೆನ್ನಲ್ಲೇ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ ಡಕ್‌ಔಟ್ ಆದರೆ ನಾಯಕ ರಿಯಾನ್ ಪರಾಗ್ ಕೇವಲ 3 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ನೆಲಕಚ್ಚಿ ನಿಂತ ಧ್ರುವ್ ಜುರೆಲ್ ಜಡೇಜಾ ಜತೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಜಡೇಜಾ ಅಜೇಯ 24 ರನ್ ಗಳಿಸಿದರೆ, ಧ್ರುವ್ ಜುರೆಲ್ 43 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 81 ರನ್ ಕಲೆಹಾಕಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೋಶ್ ಹೇಜಲ್‌ವುಡ್ ಹಾಗೂ ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular