ಮೊನ್ನೆ ( ಮೇ 31 ) ಅಹ್ಮಾದಾಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ಗಳ ಗೆಲುವನ್ನು ದಾಖಲಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಟೈಟನ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್ಗಳ ಸುಲಭ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು.
ಹೀಗೆ ಸತತವಾಗಿ ಎರಡನೇ ಬಾರಿಗೆ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೋದಿ ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಐಸ್ ವಾಟರ್ ಮೈ ಮೇಲೆ ಸುರಿದುಕೊಂಡು ಸಂಭ್ರಮಿಸಿದರು. ಕೋಚ್, ಸಿಬ್ಬಂದಿಗಳು ಹಾಗೂ ಆಟಗಾರರು ಸಮನಾಗಿ ಈ ಖುಷಿಯ ಗಳಿಗೆಯಲ್ಲಿ ಭಾಗಿಯಾದರು.
ಇನ್ನು ಟ್ರೋಫಿ ಪಡೆದ ನಂತರ ಫೋಟೊಶೂಟ್ಗೆ ಕುಳಿತ ತಂಡದ ಆಟಗಾರರೆಲ್ಲ ಎರಡು ಟ್ರೋಫಿ ಎಂದು ಕೈ ಸನ್ನೆ ಮಾಡಿ ಸಂಭ್ರಮಿಸಲು ಆರಂಭಿಸಿದರು. ಎಲ್ಲ ಆಟಗಾರರೂ ಎರಡು ಟ್ರೋಫಿ ಎಂದು ತೋರಿಸಿ ಸೆಲೆಬ್ರೇಟ್ ಮಾಡಿದರೆ, ಕೃನಾಲ್ ಪಾಂಡ್ಯ ಮಾತ್ರ ಐದು ಟ್ರೋಫಿ ಎಂದು ಕೈ ಸನ್ನೆ ಮಾಡಿ ಸಂಭ್ರಮಿಸಲು ಶುರು ಮಾಡಿದರು.
ಇದನ್ನು ಕಂಡ ವಿರಾಟ್ ಕೊಹ್ಲಿ ಕೃನಾಲ್ರನ್ನು ತಡೆದು ಎರಡು ಟ್ರೋಫಿ ಎಂದು ತೋರಿಸುವಂತೆ ಮನವಿ ಮಾಡಿದರು. ಆರ್ಸಿಬಿಗೂ ಬರುವ ಮುಂಚೆ ಮೂರು ವರ್ಷಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಕೃನಾಲ್ ಪಾಂಡ್ಯ ತಮ್ಮ ವೃತ್ತಿ ಜೀವನದ ಆರಂಭದ ಆರು ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು.
ಹೀಗಾಗಿ ತಾನು ಆರು ವರ್ಷ ನಿಷ್ಠೆಯಿಂದ ಆಡಿದ ಮುಂಬೈ ಇಂಡಿಯನ್ಸ್ ತನ್ನನ್ನು ಬಿಟ್ಟುಕೊಟ್ಟ ಕಾರಣ ಐದು ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ಗೆ ಕೌಂಟರ್ ಕೊಡುವ ನಿಟ್ಟಿನಿಂದ ಕೃನಾಲ್ ಈ ರೀತಿ ಐದು ಕಪ್ ಎಂದು ತೋರಿಸಿ ಸಂಭ್ರಮಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ಹರಿದಾಡಿದವು. ಆದರೆ ಅಸಲಿಯತ್ತಿಗೆ ಕೃನಾಲ್ ಪಾಂಡ್ಯ ಮುಂಬೈಗೆ ಕೌಂಟರ್ ಕೊಡುವ ಸಲುವಾಗಿ ಈ ರೀತಿ ಸೆಲೆಬ್ರೇಟ್ ಮಾಡಲಿಲ್ಲ. ಬದಲಾಗಿ ಇದು ಕೃನಾಲ್ ಪಾಂಡ್ಯ ಗೆದ್ದ ಐದನೇ ಕಪ್ ಆದ ಸಲುವಾಗಿ ಕೃನಾಲ್ ಆ ರೀತಿ ಸಂಭ್ರಮಾಚರಣೆ ಮಾಡಿದರು.
ಮುಂಬೈ ಪರ ಮೂರು ಟ್ರೋಫಿ ಗೆದ್ದಿದ್ದ ಕೃನಾಲ್ ಪಾಂಡ್ಯ ಗೆದ್ದ ಐದನೇ ಟ್ರೋಫಿ ಇದಾದ ಕಾರಣ ಕೃನಾಲ್ ತಂಡದ ಎಲ್ಲ ಆಟಗಾರರಿಗೂ ಇದು ಎರಡನೇ ಕಪ್ ಆದರೆ ತನಗೆ ಮಾತ್ರ ಇದು ಐದನೇ ಕಪ್ ಎಂದು ತೋರಿಸುವ ಸಲುವಾಗಿ ಆ ರೀತಿ ಸಂಭ್ರಮಿಸಿದರು. ಈ ಮೂಲಕ ತನ್ನ ತಂಡದ ಆಟಗಾರರಿಗೆ ಕೌಂಟರ್ ಕೊಟ್ಟು ಕಾಲೆಳೆಯುವುದು ಕೃನಾಲ್ ಉದ್ದೇಶವಾಗಿತ್ತು.

