2026ರ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮಕ್ತಾಯವಾಗಿದ್ದು, ಇಂದಿನಿಂದ ( ಮೇ 26 ) ಪ್ಲೇಆಫ್ ಸುತ್ತು ಆರಂಭವಾಗುತ್ತಿದೆ.
ಲೀಗ್ ಹಂತದ ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಪ್ರವೇಶ ಮಾಡಿವೆ.
ಇನ್ನು ಇಂದು ( ಮೇ 26 ) ಪ್ಲೇಆಫ್ ಸುತ್ತಿನ ಮೊದಲ ಪಂದ್ಯ ಕ್ವಾಲಿಫಯರ್ ಒಂದು ನಡೆಯಲಿದ್ದು, ಧರಂಶಾಲಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನ ಹಾಗೂ ಗುಜರಾತ್ ಎರಡನೇ ಸ್ಥಾನ ಪಡೆದಿರುವ ಕಾರಣ ಒಂದನೇ ಕ್ವಾಲಿಫಯರ್ ಪಂದ್ಯ ಆಡುವ ಅವಕಾಶ ಸಿಕ್ಕಿದ್ದು, ಇಂದು ಗೆಲ್ಲಲಿರುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.
ಇನ್ನು ಸೋಲು ಕಾಣುವ ತಂಡಕ್ಕೆ ಅನುಕೂಲವಿದ್ದು, ಇಂದು ಸೋತರೂ ಫೈನಲ್ ಪ್ರವೇಶಕ್ಕೆ ಮತ್ತೊಂದು ಅವಕಾಶವಿದೆ. ಹೌದು, ಇಂದು ಸೋಲುವ ತಂಡ ಎಲಿಮಿನೇಟರ್‌ನಲ್ಲಿ ಗೆದ್ದು ಬರುವ ತಂಡದ ಜತೆ ಸೆಣಸಾಡಲಿದೆ.
ಎಲಿಮಿನೇಟರ್ ಪಂದ್ಯ ನಾಳೆ ( ಮೇ 27 ) ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟ್ ಆಗಿ ಟೂರ್ನಿಯಿಂದ ಹೊರಬಿದ್ದರೆ ಗೆಲ್ಲುವ ತಂಡ ಕ್ವಾಲಿಫಯರ್ ಎರಡನೇ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಪಂದ್ಯದಲ್ಲಿ ಇಂದು ಸೋಲುವ ತಂಡದ ಜತೆ ಸೆಣಸಾಟ ನಡೆಸಲಿದೆ.
ಉದಾಹರಣೆಗೆ ಇಂದು ಆರ್‌ಸಿಬಿ ಏನಾದರೂ ಸೋತರೆ ನಾಳೆ ಎಲಿಮಿನೇಟರ್‌ನಲ್ಲಿ ಗೆಲ್ಲುವ ತಂಡದ ಜತೆ ಮೇ 29ರಂದು ನಡೆಯುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಫೈನಲ್‌ಗಾಗಿ ಎರಡನೇ ಬಾರಿ ಹೋರಾಡುವ ಅವಕಾಶ ಪಡೆದುಕೊಳ್ಳಲಿದೆ.

