ನಿನ್ನೆ ( ಏಪ್ರಿಲ್ 22 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಲೀಗ್ ಹಂತದ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 40 ರನ್ಗಳ ಭರ್ಜರಿ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್ಗೆ 160 ರನ್ಗಳ ಸಾಧಾರಣ ಗುರಿಯನ್ನು ನೀಡಿತು. ಈ ಗುರಿಯನ್ನೂ ಸಹ ಬೆನ್ನಟ್ಟಲಾಗದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್ಗಳಲ್ಲಿ 119 ರನ್ಗೆ ಆಲ್ಔಟ್ ಆಯಿತು.
ಸಾಧಾರಣ ಗುರಿಯನ್ನು ನೀಡಿ ಬೌಲರ್ಗಳ ಅಮೋಘ ಪ್ರದರ್ಶನದ ಸಹಾಯದಿಂದ ಗೆದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವೇಳೆ ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿತ್ತು. ಕೇವಲ 77 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಆಸರೆಯಾದರು.
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಡೇಜಾ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 43 ರನ್ ಕಲೆಹಾಕಿ ತಂಡಕ್ಕೆ ಸುಧಾರಣೆ ತಂದು ಕಠಿಣ ಪಿಚ್ನಲ್ಲಿ ಎದುರಾಳಿಗೆ ತುಸು ಪೈಪೋಟಿ ನೀಡುವ ಗುರಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೇ ಬೌಲಿಂಗ್ನಲ್ಲಿ ನಿಕೋಲಸ್ ಪೂರನ್ ವಿಕೆಟ್ ಪಡೆದ ಜಡೇಜಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಹೀಗೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಡೇಜಾ ‘ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆಯುತ್ತಿರುವುದು ತುಂಬಾ ಖುಷಿ ತಂದಿದೆ. ನಾನು ಈ ಪ್ರಶಸ್ತಿಯನ್ನು ಗುಜರಾತ್ನ ಶಿಕ್ಷಣ ಮಂತ್ರಿಗೆ ಅರ್ಪಿಸುತ್ತೇನೆ. ಆಕೆ ನಿನ್ನೆಯೇ ಇಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತೇನೆ ಎಂದು ಹೇಳಿದ್ದಳು ಹಾಗೂ ನಾನು ಅದೇ ರೀತಿ ಆಡಿದೆ. ಚೆಂಡು ಹೆಚ್ಚಾಗಿ ಸ್ವಿಂಗ್ ಆಗುತ್ತಿದ್ದ ಕಾರಣ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಸಾಧ್ಯವಾದಷ್ಟು ಕೊನೆಯವರೆಗೆ ಆಡುವುದು ನನ್ನ ಯೋಜನೆಯಾಗಿತ್ತು. ಟಿ ಟ್ವೆಂಟಿ ಕ್ರಿಕೆಟ್ನ ಕೊನೆಯ ಓವರ್ನಲ್ಲಿ ಹೆಚ್ಚು ರನ್ ಗಳಿಸಬಹುದು, ಅದನ್ನೇ ಮಾಡಿದೆವು’ ಎಂದು ತಿಳಿಸಿದರು.
ಅಂದಹಾಗೆ ಗುಜರಾತ್ನ ಶಿಕ್ಷಣ ಮಂತ್ರಿ ರಿವಾಬಾ ಜಡೇಜಾ. ಇವರು ರವೀಂದ್ರ ಜಡೇಜಾ ಅವರ ಪತ್ನಿ. ಹೀಗೆ ಜಡೇಜಾ ತಮ್ಮ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ಪತ್ನಿಗೆ ಅರ್ಪಿಸಿದ್ದಾರೆ.

