ನಿನ್ನೆ ( ಏಪ್ರಿಲ್ 22 ) ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 40 ರನ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್‌ಗೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಈ ಗುರಿಯನ್ನೂ ಸಹ ಬೆನ್ನಟ್ಟಲಾಗದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್‌ಗಳಲ್ಲಿ 119 ರನ್‌ಗೆ ಆಲ್‌ಔಟ್ ಆಯಿತು.
ಸಾಧಾರಣ ಗುರಿಯನ್ನು ನೀಡಿದರೂ ಸಹ ರಾಜಸ್ಥಾನ್ ರಾಯಲ್ಸ್ ತನ್ನ ಬೌಲಿಂಗ್ ಪಡೆಯ ಅಮೋಘ ಪ್ರದರ್ಶನದಿಂದ ಈ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರೆ, ಸೋತ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
ಈ ಸೋಲು ಲಕ್ನೋ ಈ ಆವೃತ್ತಿಯಲ್ಲಿ ಕಂಡ ಐದನೇ ಸೋಲಾಗಿದ್ದು, ಸದ್ಯ ನಾಯಕ ಪಂತ್ ಹಾಗೂ ಬಳಗವನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಯಾವ ತಂಡಕ್ಕೂ ಸಹ ತಕ್ಕ ಪೈಪೋಟಿ ಕೊಡುವ ಸಾಮರ್ಥ್ಯವಿಲ್ಲದ ಲಕ್ನೋ ಸೂಪರ್ ಜೈಂಟ್ಸ್ ಉಚಿತವಾಗಿ ಎರಡು ಅಂಕ ನೀಡುವ ತಂಡ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಇನ್ನು ನೆಟ್ಟಿಗರು ಮಾತ್ರವಲ್ಲದೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಆಟಗಾರ ರವಿ ಬಿಷ್ಣೋಯಿ ಸಹ ಲಕ್ನೋ ಕಾಲೆಳೆದು ಖಡಕ್ ಟಾಂಗ್ ಕೊಟ್ಟಿದ್ದಾರೆ. ಹೌದು, ಲಕ್ನೋದ ಹಿಮ್ಮತ್ ಸಿಂಗ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ ರವಿ ಬಿಷ್ಣೋಯಿ ಕೈನಲ್ಲಿ ಸಹಿ ಹಾಕುವ ಸನ್ನೆ ಮಾಡಿ ಸಂಭ್ರಮಿಸಿದರು. ಇದು ಲಕ್ನೋ ಸೂಪರ್ ಜೈಂಟ್ಸ್‌ನ ದಿಗ್ವೇಶ್ ರಾಠಿ ವಿಕೆಟ್ ಪಡೆದಾಗ ಮಾಡುವ ಸಂಭ್ರಮಾಚರಣೆ.
ಹೀಗೆ ರವಿ ಬಿಷ್ಣೋಯಿ ದಿಗ್ವೇಶ್ ರಾಠಿಯ ಹಾಗೆ ಸಂಭ್ರಮಿಸಿ ಕೌಂಟರ್ ಕೊಡಲು ಕಾರಣ ಈ ಬಾರಿಯ ಆವೃತ್ತಿಗೂ ಮುನ್ನ ನಡೆದ ರಿಟೆನ್ಷನ್‌ನಲ್ಲಿ ಲಕ್ನೋ ತಂಡ ತನ್ನ ಕೈಬಿಟ್ಟಿದ್ದು. ಹೌದು, ಕಳೆದ ಎರಡು ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ರವಿ ಬಿಷ್ಣೋಯಿ ಅವರನ್ನು ಕೈಬಿಟ್ಟಿದ್ದ ತಂಡ ಅವರ ಬದಲಾಗಿ ದಿಗ್ವೇಶ್ ರಾಠಿಯನ್ನು ತಂಡದಲ್ಲಿ ಉಳಿಸಿಕೊಂಡಿತ್ತು.
ಈ ಸಲುವಾಗಿ ನಿನ್ನೆ ರವಿ ಬಿಷ್ಣೋಯಿ ದಿಗ್ವೇಶ್ ರಾಠಿಗಾಗಿ ತನ್ನನ್ನು ಬಿಟ್ಟ ಲಕ್ನೋ ವಿರುದ್ಧ ದಿಗ್ವೇಶ್ ರೀತಿ ಸಂಭ್ರಮಿಸಿ ಲಕ್ನೋ ಮಾಲೀಕ ಸಂಜೀವ್ ಗೊಯೆಂಕಾ ಕಾಲೆಳೆದಿದ್ದಾರೆ.

