ನಿನ್ನೆ ( ಏಪ್ರಿಲ್ 10 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 16ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ತನ್ನ ಜಯದ ನಾಗಾಲೋಟವನ್ನು ಮುಂದುವರಿಸಿದೆ.
ಇತ್ತ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಹ್ಯಾಟ್ರಿಕ್ ಜಯದೆಡೆ ಚಿತ್ರ ನೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಿನ್ನಡೆ ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.
ಆರಂಭದಲ್ಲಿ ಆಘಾತ ಅನುಭವಿಸಿ ಸವಾಲಿನ ಗುರಿಯನ್ನು ನೀಡಿ ಗೆಲುವಿನ ಕನಸು ಕಾಣುತ್ತಿದ್ದ ಆರ್ಸಿಬಿ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಪಡೆದು ಬೌಲಿಂಗ್ನಲ್ಲೂ ಒಳ್ಳೆಯ ಆರಂಭ ಪಡೆದುಕೊಂಡಾಗಲೇ ಮತ್ತೊಂದೆಡೆ ತನ್ನ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 78 ರನ್ ಚಚ್ಚಿ ಪಂದ್ಯವನ್ನು ತಮ್ಮ ತಂಡದತ್ತ ವಾಲುವಂತೆ ಮಾಡಿದರು.
ಹೀಗೆ ಪಂದ್ಯದಲ್ಲಿ ಉತ್ತಮ ಆಟವನ್ನಾಡಿದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ವೈಭವ್ ಸೂರ್ಯವಂಶಿ ಆರ್ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಜತೆ ಮೈದಾನದಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆರ್ಸಿಬಿ ನಾಯಕ ರಜತ್ ಪಟಿದಾರ್ ವೈಭವ್ ಸೂರ್ಯವಂಶಿಯನ್ನು ಪ್ರೀತಿಯಿಂದ ನಗುತ್ತಾ ಕುತ್ತಿಗೆ ಹಿಡಿದು ತಮ್ಮ ವಿರುದ್ಧ ಚೆನ್ನಾಗಿ ಆಡಿದ್ದಕ್ಕೆ ಗೇಲಿ ಮಾಡಿದ್ದಾರೆ. ಈ ಸುಂದರ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

