ನಿನ್ನೆ ( ಮೇ 23 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಸತತ ಆರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ ಜೋಶ್ ಇಂಗ್ಲಿಸ್ ಅರ್ಧಶತಕ ಹಾಗೂ ಆಯುಷ್ ಬದೋನಿ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 197 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರಾನ್ ಅರ್ಧಶತಕ ಹಾಗೂ ಶ್ರೇಯಸ್ ಐಯ್ಯರ್ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತು.
ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿನ ಎನ್ನ ಎಲ್ಲ ಲೀಗ್ ಹಂತದ ಪಂದ್ಯಗಳನ್ನೂ ಆಡಿ ಮುಗಿಸಿದ್ದು, 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ಈ ಪಂದ್ಯದ ಫಲಿತಾಂಶ ಹೊರಬೀಳುತ್ತಿದ್ದಂತೆ ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು, 7 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎಲಿಮಿನೇಟ್ ಆಗಿದೆ.
ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಉಳಿದೊಂದು ಪಂದ್ಯ ಗೆದ್ದರೂ ಒಟ್ಟು 14 ಅಂಕಗಳಾಗಲಿದ್ದು, ಪಂಜಾಬ್ 15 ಅಂಕ ಮುಟ್ಟಿರುವ ಕಾರಣ ಡೆಲ್ಲಿಗೆ ಕ್ವಾಲಿಫೈ ಅವಕಾಶದ ಬಾಗಿಲು ಮುಚ್ಚಿದೆ. ಹೀಗಾಗಿ ಎಲಿಮಿನೇಟ್ ಆಗಿದೆ.
ಸದ್ಯ ಪಂಜಾಬ್ ಕಿಂಗ್ಸ್ ಜತೆಗೆ 14 ಅಂಕದೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವ ರಾಜಸ್ಥಾನ್ ರಾಯಲ್ಸ್ ಹಾಗೂ 13 ಅಂಕಗಳೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪ್ಲೇಆಫ್ ಕೊನೆಯ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ.

