ನಿನ್ನೆ ( ಮೇ 2 ) ಚೆನ್ನೈ ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 44ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 160 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಬಾರಿಸಿತು. ಈ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಹೀಗೆ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆದ್ದು, ಉಳಿದ ಏಳರಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಕೇವಲ 4 ಅಂಕಗಳನ್ನು ಹೊಂದಿದೆ. ಹೀಗೆ ಟೂರ್ನಿಯಲ್ಲಿ ಹೀನಾಯ ಹಂತದಲ್ಲಿರುವ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪಲಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ.
ಸರಿಯಾಗಿ ನೋಡಿದರೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶ ಈ ಹಂತದಲ್ಲಿ ಆಗದೇ ಇರುವ ಕೆಲಸ. ಏಕೆಂದರೆ ಮುಂಬೈ ಇಂಡಿಯನ್ಸ್‌ಗೆ 5 ಪಂದ್ಯಗಳು ಉಳಿದಿದ್ದು, ಆ ಎಲ್ಲ ಪಂದ್ಯಗಳನ್ನು ಗೆದ್ದರೆ 14 ಅಂಕಗಳನ್ನು ಹೊಂದಲಿದೆ. ಆದರೆ 14 ಅಂಕಗಳು ಈ ಬಾರಿ ಪ್ಲೇಆಫ್ ತಲುಪಲು ಕಟ್‌ಆಫ್ ಅಂಕ ಆಗಲಿದೆಯಾ ಎಂಬುದು ಅನುಮಾನ.
ಏಕೆಂದರೆ ಪಂಜಾಬ್ ಕಿಂಗ್ಸ್ 13 ಅಂಕಗಳು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಲಾ 12 ಅಂಕಗಳನ್ನು ಹೊಂದಿದ್ದು, ಈ ಎಲ್ಲ ಮೂರು ತಂಡಗಳಿಗೂ ಇನ್ನೂ 5 ಪಂದ್ಯಗಳು ಬಾಕಿ ಇವೆ. ಈ ತಂಡಗಳು ಐದು ಪಂದ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಪಂದ್ಯ ಗೆದ್ದರೆ ಅಲ್ಲಿಗೆ 16 ಅಂಕಗಳನ್ನು ಹೊಂದಲಿವೆ. ಅಲ್ಲದೇ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್‌ಗೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇದ್ದು, ಈ ತಂಡವೂ ಸಹ 16 ಅಂಕ ಸಂಪಾದಿಸುವ ಸಾಧ್ಯತೆ ಇದೆ. ಹೀಗೆ ಈ ನಾಲ್ಕು ತಂಡಗಳೇನಾದರೂ 16 ಅಂಕ ದಾಟಿದರೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಆಸೆ ನೆರವೇರಲ್ಲ.
ಅಲ್ಲದೆ ಮುಂಬೈ ಇಂಡಿಯನ್ಸ್ ನೆಟ್ ರನ್‌ರೇಟ್ ತೀರಾ ಕೆಟ್ಟದ್ದಾಗಿದ್ದು, ಉಳಿದ ಐದು ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ. ಒಂದುವೇಳೆ ಈ ಐದು ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯ ಸೋತರೂ ಮುಂಬೈ ಇಂಡಿಯನ್ಸ್ ಎಲಿಮಿನೇಟ್ ಪಕ್ಕಾ.

