ಇದೇ ಮಾರ್ಚ್ 28ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ 2026 ಆರಂಭವಾಗಲಿದೆ. ಇತ್ತೀಚೆಗಷ್ಟೆ ಮುಕ್ತಾಯವಾದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಂಭ್ರಮಿಸಿದ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಐಪಿಎಲ್ ಆರಂಭದ ದಿನದಿಂದ ವಿವಿಧ ತಂಡಗಳನ್ನು ಬೆಂಬಲಿಸುತ್ತಾ ತಮ್ಮ ಮಧ್ಯೆಯೇ ಟ್ರೋಲ್, ಆನ್‌ಲೈನ್ ವಾರ್ ಮಾಡಲು ಸಿದ್ಧರಾಗುತ್ತಿದ್ದಾರೆ.
ಇನ್ನು ಐಪಿಎಲ್ ಎಂದಮೇಲೆ ಕೇವಲ ಫ್ಯಾನ್‌ವಾರ್ ಮಾತ್ರವಲ್ಲದೇ ಫ್ರಾಂಚೈಸಿ ವಾರ್‌ಗಳೂ ಸಹ ಇದ್ದದ್ದೇ. ಇದಕ್ಕೆ ತಾಜಾ ಉದಾಹರಣೆ ಸದ್ಯ ಮುಂಬೈ ಇಂಡಿಯನ್ಸ್ ತನ್ನ ಎಕ್ಸ್ ಖಾತೆಯಲ್ಲಿ ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡಿದ ಟ್ವೀಟ್ ಒಂದನ್ನು ಈಗ ಹಂಚಿಕೊಂಡು ಕೌಂಟರ್ ಕೊಟ್ಟಿರುವುದು.
ಹೌದು, ಸೆಪ್ಟೆಂಬರ್ 28, 2025ರಂದು ಭಾರತ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವನ್ನು ಕಂಡು ಚಾಂಪಿಯನ್ ಆಗಿತ್ತು. ಈ ಪಂದ್ಯದಲ್ಲಿ ತಿಲಕ್ ವರ್ಮಾ 53 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
ತಿಲಕ್ ವರ್ಮಾರ ಈ ಇನ್ನಿಂಗ್ಸ್‌ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ತನ್ನ ಎಕ್ಸ್ ಖಾತೆಯಲ್ಲಿ ‘ನೀನು ನಮಕ್ ಅಲ್ಲ ಚಂದನ ವರ್ಮಾ. ಭಾರತ ಮಾತೆಗೆ ತಿಲಕ’ ಎಂದು ಬರೆದುಕೊಂಡು ತಿಲಕ್ ವರ್ಮಾ ಫೋಟೊ ಹಂಚಿಕೊಂಡಿತ್ತು. ಈ ಮೂಲಕ ತಿಲಕ್ ವರ್ಮಾ ಆಟವನ್ನು ಆರ್‌ಸಿಬಿ ಕೊಂಡಾಡಿತ್ತು. ಇದು ಸೆಪ್ಟೆಂಬರ್ 29, 2025ರಂದು ಆರ್‌ಸಿಬಿ ಮಾಡಿದ್ದ ಟ್ವೀಟ್.
ಇದೀಗ ಮುಂಬೈ ಇಂಡಿಯನ್ಸ್ ಈ ಟ್ವೀಟನ್ನು ಶೇರ್ ಮಾಡಿ ‘ಆತ ನಮ್ಮದೇ ಚಂದನದ ತಿಲಕ, ಏಪ್ರಿಲ್ 12ರಂದು ವಾಂಖೆಡೆಯಲ್ಲಿ ‘ ಎಂದು ಬರೆದುಕೊಂಡಿದೆ. ಹೀಗೆ ಆರ್‌ಸಿಬಿ ತಿಲಕ್ ವರ್ಮಾನನ್ನು ಭಾರತದ ಪರ ಆಡಿದ ಆಟಕ್ಕೆ ಹೊಗಳಿದ್ದನ್ನು ಈಗ ಶೇರ್ ಮಾಡಿಕೊಂಡು ಏಪ್ರಿಲ್ 12ರಂದು ನಡೆಯಲಿರುವ ಆರ್‌ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯಕ್ಕೆ ಕೌಂಟರ್ ಕೊಡುವ ಮೂಲಕ ಮುಂಬೈ ಇಂಡಿಯನ್ಸ್ ಬಾಲಬಿಚ್ಚಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಒಂದು ಫ್ರಾಂಚೈಸಿ ಪರಸ್ಪರ ಬೆಂಬಲ ಸೂಚಿಸಿ, ದೇಶದ ಪರ ಆಡಿದ ಆಟಗಾರನನ್ನು ಹೊಗಳಿದರೆ, ಮತ್ತೊಂದು ಫ್ರಾಂಚೈಸಿ ಅಲ್ಲೂ ಭೇದ ಮಾಡಿ ತನ್ನ ಕೀಳುಮಟ್ಟದ ಮನಸ್ಥಿತಿ ಪ್ರದರ್ಶಿಸಿದೆ ಎಂದು ಕಿಡಿಕಾರಿದ್ದಾರೆ.

