ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಿನ್ನೆ ( ಮೇ 7 ) ನಡೆದ ಐಪಿಎಲ್ 2026ರ ಲೀಗ್ ಹಂತದ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 9 ರನ್ಗಳ ರೋಚಕ ಗೆಲುವನ್ನು ಕಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮಳೆಯಿಂದಾಗಿ ಎರಡು ಬಾರಿ ನಿಂತು ನಡೆದ ಪಂದ್ಯದಲ್ಲಿ ಒಂದು ಓವರ್ ಕಡಿತಗೊಂಡು 19 ಓವರ್ಗಳ ಪಂದ್ಯ ನಡೆದಿದ್ದು, ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆರ್ಸಿಬಿಗೆ 213 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ ಮೂರನೇ ಗೆಲುವನ್ನು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 111 ರನ್ ಚಚ್ಚಿದರು. ಇನ್ನುಳಿದಂತೆ ಅರ್ಶಿನ್ ಕುಲ್ಕರ್ಣಿ 17, ನಿಕೋಲಸ್ ಪೂರನ್ 38, ಏಡನ್ ಮಾರ್ಕ್ರಮ್ ಅಜೇಯ 1 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ನಾಯಕ ರಿಷಬ್ ಪಂತ್ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 32 ರನ್ ಬಾರಿಸಿ ಅಬ್ಬರಿಸಿದರು.
ಆರ್ಸಿಬಿ ಪರ ಜೋಶ್ ಹೇಜಲ್ವುಡ್, ಕೃನಾಲ್ ಪಾಂಡ್ಯ ಹಾಗೂ ರಸಿಕ್ ಧರ್ ಸಲಾಮ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೇಕಬ್ ಬೆಥೆಲ್ ಮೊದಲ ಓವರ್ನಲ್ಲೇ 4 ರನ್ಗಳಿಗೆ ಔಟ್ ಆದರೆ, ಎರಡನೇ ಓವರ್ನಲ್ಲಿ ಕೊಹ್ಲಿ ಡಕ್ಔಟ್ ಆದರು. ಹೀಗೆ ಕೇವಲ 9 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಆರ್ಸಿಬಿಗೆ ಮೂರನೇ ವಿಕೆಟ್ಗೆ ಜತೆಯಾದ ಪಡಿಕ್ಕಲ್ ಹಾಗೂ ನಾಯಕ ರಜತ್ ಪಟಿದಾರ್ ಜೋಡಿ 53 ಎಸೆತಗಳಲ್ಲಿ 95 ರನ್ಗಳ ಜತೆಯಾಟವನ್ನಾಡುವ ಮೂಲಕ ಆಸರೆಯಾಯಿತು. ಪಡಿಕ್ಕಲ್ 34 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಅದೇ ಓವರ್ನಲ್ಲಿ ಆಗ ತಾನೇ ಕಣಕ್ಕಿಳಿದಿದ್ದ ಜಿತೇಶ್ ಶರ್ಮಾ 1 ರನ್ ಗಳಿಸಿ ಔಟ್ ಆದರು. ನಂತರದ ಓವರ್ನಲ್ಲಿ ನೆಲಕಚ್ಚಿ ನಿಂತಿದ್ದ ರಜತ್ ಪಟಿದಾರ್ 31 ಎಸೆತಗಳಲ್ಲಿ 61 ರನ್ ಬಾರಿಸಿ ಔಟ್ ಆದರು. ಈ ಸಂದರ್ಭದಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ 17 ಎಸೆತಗಳಲ್ಲಿ 40 ರನ್ ಬಾರಿಸಿ ಸೋಲಿನತ್ತ ಮುಖ ಮಾಡಿದ್ದ ತಂಡಕ್ಕೆ ಗೆಲುವಿನ ಭರವಸೆ ಹುಟ್ಟುಹಾಕಿದರು. ನಂತರ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ 18 ಎಸೆತಗಳಲ್ಲಿ 47 ರನ್ ಬೇಕಿದ್ದ ಪಂದ್ಯವನ್ನು ಕೊನೆಯ ಓವರ್ನಲ್ಲಿ 20 ರನ್ ಬೇಕಾದ ಹಂತಕ್ಕೆ ತಂದರು. ಕೊನೆಯ ಓವರ್ ಎಸೆದ ದಿಗ್ವೇಶ್ ರಾಠಿ ಒಂದು ಬೌಂಡರಿ ಕೊಟ್ಟಿದ್ದು ಬಿಟ್ಟರೆ ಉತ್ತಮ ಬೌಲಿಂಗ್ ಮಾಡಿ ಹಿಂದಿನ ಓವರ್ಗಳಲ್ಲಿ ಬೌಂಡರಿ ಚಚ್ಚಿದ್ದ ಕೃನಾಲ್ ಹಾಗೂ ಶೆಫರ್ಡ್ರನ್ನು ಕಟ್ಟಿಹಾಕಿದರು. ಶೆಫರ್ಡ್ 15 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರೆ, ಕೃನಾಲ್ ಪಾಂಡ್ಯ 16 ಎಸೆತಗಳಲ್ಲಿ ಅಜೇಯ 28 ರನ್ ಬಾರಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಪರ ಪ್ರಿನ್ಸ್ ಯಾದವ್ ಮೂರು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಶಹಬಾಜ್ ಅಹ್ಮದ್ ಎರಡು ವಿಕೆಟ್ ಹಾಗೂ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದರು.

