ಯುವ ಆಟಗಾರರಾದ ಮುಕುಲ್ ಚೌಧರಿ ಹಾಗೂ ಆಯೂಷ್ ಬದೋನಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಕೊಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು.
ಕೆಕೆಆರ್ ಇನ್ನಿಂಗ್ಸ್: ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ಗೆ ನಾಯಕ ಅಜಿಂಕ್ಯಾ ರಹಾನೆ 24 ಎಸೆತಗಳಲ್ಲಿ 41 ಹಾಗೂ ಅಂಗ್‌ಕ್ರಿಶ್ ರಘುವಂಶಿ 33 ಎಸೆತಗಳಲ್ಲಿ 45 ಕಲೆಹಾಕಿ 84ರನ್‌ಗಳ ಜೊತೆಯಾಟ ನೀಡುವ ಮೂಲಕ ಉತ್ತಮ ಆರಂಭ ಒದಗಿಸಿದರು. ಇತ್ತ ಫಿನ್ ಆಲೆನ್ 9, ರಿಂಕು ಸಿಂಗ್ 4 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದರು. ಈ ವೇಳೆ ಜೊತೆಯಾದ ಕ್ಯಾಮರೋನ್ ಗ್ರೀನ್ ರೋಮನ್ ಪೊವೆಲ್ 70ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡದ ಮೊತ್ತ 180ರ ಗಡಿ ದಾಟಲು ಸಹಕರಿಸಿದರು. ಗ್ರೀನ್ 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 32 ರನ್ ಗಳಿಸಿದರೆ, ರೋಮನ್ ಪೊವೆಲ್ 24 ಎಸೆತ ಎದುರಿಸಿ 4 ಬೌಂಡರಿ, 2 ಸಿಕ್ಸರ್ ಒಳಗೊಂಡಂತೆ ಅಜೇಯ 39 ರನ್ ಕಲೆಹಾಕಿದರು. ಲಕ್ನೋ ಪರ ಪ್ರಿನ್ಸ್ ಯಾದವ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ ಹಾಗೂ ಆವೇಶ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಎಲ್‌ಎಸ್‌ಜಿ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತುವ ವೇಳೆ ಬಲಾಢ್ಯ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದ ಲಕ್ನೋ ಎಡವಿತು. ಮಿಚೆಲ್ ಮಾರ್ಷ್ 15, ಐಡೆನ್ ಮಾರ್ಕ್ರಂ 22, ನಾಯಕ ರಿಷಬ್ ಪಂತ್ 10, ನಿಕೋಲಸ್ ಪೂರನ್ 13 ರನ್ ಗಳಿಸಿ ಔಟಾಗಿದ್ದು, ತಂಡಕ್ಕೆ ಭಾರೀ ಪೆಟ್ಟು ನೀಡಿತು. ಅನುಭವಿಗಳ ವೈಫಲ್ಯದ ನಡುವೆ ಇಂಪ್ಯಾಕ್ಟ್ ಪ್ಲೇಯರ್ ಆಯೂಷ್ ಬದೋನಿ ಅರ್ಧ ಶತಕದಾಟದವಾಡಿದರು. 34 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ ೫೪ರನ್ ಕಲೆಹಾಕಿ, ಗೆಲುವಿನ ಆಚೆ ಚಿಗುರಿಸಿ ನಿರ್ಗಮಿಸಿದರು. ಇವರ ಬಳಿಕ ಗೆಲುವಿನ ಜವಾಬ್ದಾರಿ ಹೊತ್ತ ಮುಕುಲ್ ಚೌಧರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಅಜೇಯರಾಗಿ ಉಳಿದ ಅವರು 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಮೂಲಕ ಅಜೇಯ 54ರನ್ ಕಲೆಹಾಕಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 30 ರನ್ ಬೇಕಿದ್ದಾಗ ಕ್ಯಾಮೆರಾನ್ ಗ್ರೀನ್ ಎಸೆದ 19ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಮುಕುಲ್ 6 ಎಸೆತಕ್ಕೆ 14 ರನ್ ಬಾರಿಸಬೇಕಾದ ಹಂತಕ್ಕೆ ಪಂದ್ಯವನ್ನು ತಂದರು. ವೈಭವ್ ಅರೋರಾ ಎಸೆದ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ಆವೇಶ್ ಖಾನ್ ಸಿಂಗಲ್ ತೆಗೆದುಕೊಂಡರೆ, ಎರಡನೇ ಎಸೆತಕ್ಕೆ ಮುಕುಲ್ ಸಿಕ್ಸರ್ ಬಾರಿಸಿದರು. ಅಲ್ಲಿಗೆ ಕೊನೆಯ 4 ಎಸೆತಗಳಲ್ಲಿ 7 ರನ್ ಬೇಕಿತ್ತು. ಮೂರನೇ ಮತ್ತು ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ ಲಕ್ನೋ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 7 ರನ್ ಬಾರಿಸಬೇಕಿತ್ತು. ಐದನೇ ಎಸೆತವನ್ನು ಮುಕುಲ್ ಸಿಕ್ಸರ್‌ಗೆ ಅಟ್ಟಿದರು ಹಾಗೂ ಅಲ್ಲಿಗೆ ಪಂದ್ಯ ಡ್ರಾ ಮಟ್ಟ ತಲುಪಿತು. ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ಚೆಂಡು ಬೀಟ್ ಆಗಿ ವಿಕೆಟ್ ಕೀಪರ್ ಕೈ ತಲುಪಿತು. ಈ ವೇಳೆ ಒಂದು ರನ್ ಓಡಿ ಲಕ್ನೋ ಗೆಲುವು ಕಂಡಿತು.
ಉಳಿದಂತೆ ಅಬ್ದುಲ್ ಸಮದ್ 2, ಮೊಹಮ್ಮದ್ ಶಮಿ 1 ಹಾಗೂ ಅವೇಶ್ ಖಾನ್ ಅಜೇಯ 1 ರನ್ ಗಳಿಸಿದರು. ಕೋಲ್ಕತ್ತಾ ಪರ ವೈಭವ್ ಅರೋರಾ ಹಾಗೂ ಅಂಕುಲ್ ರಾಯ್ ತಲಾ 2, ಸುನೀಲ್ ನರೈನ್, ಕಾರ್ತಿಕ್ ತ್ಯಾಗಿ ಹಾಗೂ ಕ್ಯಾಮರೋನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.

